ಒಂದು ದಟ್ಟ ಕಾಡಿತ್ತು. ಅ ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಅ ಮರ ಬಹಳ ವರ್ಷಗಳಿಂದ ಜೀವಿಸಿದ್ದರಿಂದ ಹಿರಿಯನಂತೆ ವರ್ತಿಸುತ್ತಿತ್ತು. ಅದೇ ವಿಷಯವಾಗಿ ಅದಕ್ಕೆ ತುಂಬಾ ಜಂಬವಿತ್ತು. ಕಾಡಿಗೆ ತಾನೇ ಹಿರಿದಾದ ಮರ, ತನ್ನಷ್ಟು ಹಿರಿಯ ಮರ ಎಲ್ಲೂ ಇಲ್ಲ, ಆದ್ದರಿಂದ ಎಲ್ಲರೂ ತನ್ನ ಮಾತು ಕೇಳಬೇಕು ಎಂದು ಮೆರೆಯುತ್ತಿತ್ತು. ತನ್ನ ನೆರಳಿನ ಆಶ್ರಯಕ್ಕೆ ಬಂದ ಪ್ರಾಣಿಗಳ ಬಳಿ “ಇಷ್ಟು ವಯಸ್ಸಾಗಿದ್ದರೂ ನನ್ನ ರೆಂಬೆ ಕೊಂಬೆಗಳು ಹಸಿರಿನಿಂದ ನಳನಳಿಸುತ್ತಿದೆ ನೋಡಿ’ ಎಂದು ನಲಿಯುತ್ತಿತ್ತು.
ಒಂದು ದಿನ ಪುಟ್ಟ ಗುಬ್ಬಿ ಮರದ ಮೇಲೆ ಕುಳಿತಿತು. ಹಿರಿಯ ಮರ ಮಾತ್ರ ಮಾತಾಡಲೇ ಇಲ್ಲ. ಯಾವತ್ತೂ ತಾನಾಗಿಯೇ ಮಾತು ಶುರುಮಾಡುತ್ತಿದ್ದ ಮರ ಇವತ್ತೇಕೆ ಸುಮ್ಮನಿದೆ ಎಂದು ಗುಬ್ಬಿ ಆಶ್ಚರ್ಯ ವ್ಯಕ್ತಪಡಿಸಿತು. ತುಂಬಾ ಹೊತ್ತು ಸುಮ್ಮನಿದ್ದ ಗುಬ್ಬಿ “ನೀನು ಯಾವಾಗಲೂ ಸಂತೋಷದಿಂದ ಇರುತ್ತಿದ್ದೆಯಲ್ಲಾ. ಇಂದು ಯಾಕೆ ಬೇಸರದಿಂದ ಇದ್ದೀಯಾ?’ ಎಂದು ಕೇಳಿತು. ಮರ “ನನ್ನ ಬೇರು ನೋಡಿದ್ದೀಯ? ಎಷ್ಟು ಕೊಳಕಾಗಿದೆ. ನನ್ನ ಎತ್ತರ, ನನ್ನ ಸೌಂದರ್ಯ ಇಷ್ಟು ಬೃಹತ್ತಾಗಿದ್ದರೂ ಬೇರುಗಳು ಮಾತ್ರ ಕೊಳಕಾಗಿದ್ದರೆ ಏನು ಚೆನ್ನ?!’.
ಅದನ್ನು ಕೇಳಿ ಪುಟ್ಟ ಗುಬ್ಬಿ ನಕ್ಕು “ಅಯ್ಯೋ ಮರವೇ… ನಿನ್ನ ಎತ್ತರ, ಸೌಂದರ್ಯ ಇವೆಲ್ಲವಕ್ಕೂ ಮುಖ್ಯ ಕಾರಣ ಇವೇ ಇದೇ ಕೆಸರು ಮೆತ್ತಿದ ಬೇರು. ಅದಿಲ್ಲದೇ ಇರುತ್ತಿದ್ದರೆ ನೀನು ಬೆಳೆಯುವುದಕ್ಕೆ ಪೋಷಕಾಂಶ ಎಲ್ಲಿಂದ ಬರಬೇಕು? ಈಗ ಅದನ್ನೇ ದೂಷಿಸುತ್ತಿರುವೆಯಲ್ಲ. ಇದು ಸರಿಯೇ?’ ಎಂದು ಕೇಳಿತು. ಆದರೆ ಮರಕ್ಕೆ ಅದು ನಾಟಲಿಲ್ಲ. ಅದು ತನ್ನ ಮೊಂಡುವಾದವನ್ನೇ ಹಿಡಿಯಿತು. “ಆದರೂ ಈ ಬೇರುಗಳು ಮಣ್ಣು ಮೆತ್ತಿಕೊಂಡಿರದೇ ಇದ್ದರೇ ಚೆಂದವಿತ್ತು’ ಎಂದು ಮತ್ತೆ ಬೇಸರಪಟ್ಟುಕೊಂಡಿತು. ಇದಕ್ಕೆ ಎಷ್ಟು ಹೇಳಿದರೂ ಅಷ್ಟೆ ಎಂದು ಅರಿತ ಗುಬ್ಬಿ ಮತ್ತೆ ಏನನ್ನೂ ಹೇಳದೆ ಅಲ್ಲಿಂದ ಹಾರಿಹೋಯಿತು.
ಕೆಲವು ದಿನಗಳ ನಂತರ ಕಾಡಿನಲ್ಲಿ ಹೊಸದೊಂದು ಸಮಸ್ಯೆ ಪ್ರಾರಂಭವಾಗಿತ್ತು. ಅದೆಲ್ಲಿಂದಲೋ ಹೆಗ್ಗಣದ ಸೈನ್ಯ ಕಾಡಿಗೆ ನುಗ್ಗಿಬಿಟ್ಟಿತು. ಸಿಕ್ಕ ಸಿಕ್ಕ ಮರಗಳನ್ನೆಲ್ಲಾ ಕಡಿದು ಹಾಕುತ್ತಿದ್ದವು. ಅವು ಕಾಡಿನ ನೆಲದಲ್ಲಿ ಬಿಲ ತೋಡಲು ಸೂಕ್ತವಾದ ಮರವನ್ನು ಹುಡುಕುತ್ತಿದ್ದವು. ಅದೇ ಸಮಯಕ್ಕೆ ಹಿರಿಯ ಮರ ಹೆಗ್ಗಣಗಳನ್ನು ತನ್ನ ಬಳಿಗೆ ಕರೆಯಿತು. ಅವುಗಳಿಂದ ತನ್ನ ಬೇರನ್ನು ಸ್ವತ್ಛ ಮಾಡಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು. ಆ ಹಿರಿಯ ಮರದ ಎತ್ತರ ಮತ್ತು ಬೃಹತ್ ಗಾತ್ರ ನೋಡಿದ ಹೆಗ್ಗಣಗಳ ಸೈನ್ಯದ ಮುಖಂಡ “ಈ ಮರದ ಕೆಳಗೆ ಬಿಲ ತೋಡಿದರೆ ತಮ್ಮ ಸೈನ್ಯದ ಸದಸ್ಯರೆಲ್ಲರೂ ವಾಸಿಸಬಹುದು’ ಎಂದಿತು. ತಮ್ಮ ಮುಖಂಡ ಹಾಗೆ ಹೇಳಿದ್ದೇ ತಡ ಹೆಗ್ಗಣಗಳು ಮರದ ಬುಡದ ಮೇಲೆ ಮುಗಿಬಿದ್ದವು. ಸ್ವಲ್ಪ ಹೊತ್ತಿನಲ್ಲಿ ಮರಕ್ಕೆ ನೋವಾಗತೊಡಗಿತು. ಬಹಳ ಬೇಗ ಹೆಗ್ಗಣಗಳು ಹಿರಿಯ ಮರದ ಬೇರನ್ನು ಕಡಿದು ಕಡಿದು ಸಡಿಲ ಮಾಡಿದವು. ಮರ ದೊಪ್ಪನೆ ಉರುಳಿಬಿತ್ತು. ತನ್ನ ಬೆಳವಣಿಗೆಗೆ ಕಾರಣವಾದ ಬೇರನ್ನೇ ದ್ವೇಷಿಸಿದ ಮರಕ್ಕೆ ತಕ್ಕ ಶಾಸ್ತಿಯಾಗಿತ್ತು.
– ಯು. ಎಚ್. ಎಮ್. ಗಾಯತ್ರಿ