Advertisement

ಪಂಜರದ ಹಕ್ಕಿ ಕಲಿಸಿದ ಪಾಠ

06:05 AM Nov 23, 2017 | Harsha Rao |

ಮಾತಂಗ ರಾಜ್ಯದ ರಾಜನೊಬ್ಬನಿಗೆ ಆಗಿಂದಾಗ್ಗೆ ಕಾಡೊಳಗೆ ನುಗ್ಗಿ ಬೇಟೆಯಾಡುವ ಖಯಾಲಿಯಿತ್ತು. ಒಮ್ಮೆ ತನ್ನ ಸೈನಿಕ ಪರಿವಾರದೊಡನೆ ಬೇಟೆಗೆ ತೆರಳಿದ್ದಾಗ ಬಹಳ ಸಮಯದವರೆಗೂ ಕಾಡಿನ ತುಂಬಾ ಸುತ್ತಾಡಿದರೂ ಯಾವೊಂದು ಪ್ರಾಣಿಯೂ ಬೇಟೆಗೆ ಸಿಗದಿದ್ದ ಕಾರಣ ಸಾಕಷ್ಟು ಬೇಸರದಿಂದ ನಿತ್ರಾಣಗೊಂಡನು. ಪುನಃ ತನ್ನ ಪರಿವಾರದೊಡನೆ ಅರಮನೆಗೆ ಹಿಂತಿರುಗುತ್ತಿದ್ದಾಗ ದಾರಿ ಮಧ್ಯದಲ್ಲಿಯೇ ಇದ್ದ ಎತ್ತರವಾದ ಮರವೊಂದರ ಮೇಲೆ ಪೊಟರೆಯೊಳಗೆ ಅನೇಕ ವಿಚಿತ್ರ ಬಣ್ಣದ ಹಕ್ಕಿಗಳು ಇರುವುದು ಕಂಡುಬಂತು. ನೋಡಲು ಸಾಕಷ್ಟು ಆಕರ್ಷಕವಾಗಿದ್ದ ಆ ಹಕ್ಕಿಗಳನ್ನು ಕಂಡೊಡನೆ ರಾಜನಿಗೆ ಅವುಗಳನ್ನು ಹಿಡಿದು ಅರಮನೆಗೆ ಕೊಂಡೊಯ್ದು ಮಹಾರಾಣಿಗೆ ಉಡುಗೊರೆಯಾಗಿ ಕೊಡಬೇಕೆಂದೆನಿಸಿತು.

Advertisement

ಕೂಡಲೇ ಅಲ್ಲಿದ್ದ ರಾಜಭಟರನ್ನು ಮರವನ್ನೇರಿಸಿದನು. ಅದೃಷ್ಟವಶಾತ್‌ ಅಲ್ಲಿದ್ದ ಹಕ್ಕಿಗಳೆಲ್ಲವೂ ಹಾರಿ ಪಾರಾದವು. ಆದರೆ ಇನ್ನೂ ಹಾರಲು ಬಾರದ ಸಣ್ಣ ಹಕ್ಕಿಯೊಂದು ರಾಜಭಟರ ಕೈಗೆ ಸಿಕ್ಕಿತು. ಅವರು ಅದನ್ನು ತಂದು ರಾಜನಿಗೆ ನೀಡಿದರು. ರಾಜನು ಅದರ ಮೈದಡವುತ್ತಾ ಅದನ್ನು ಅರಮನೆಗೆ ಕೊಂಡೊಯ್ದು ಬಂಗಾರದ ಪಂಜರವೊಂದರಲ್ಲಿ ಹಾಕಿ ಮಹಾರಾಣಿಗೆ ಉಡುಗೊರೆಯಾಗಿ ನೀಡಿದನು. ಹಕ್ಕಿಯ ಅಂದಚೆಂದ ಕಂಡ ರಾಣಿಯು ಸಂತೋಷಗೊಂಡಳು. ಅರಮನೆಯಲ್ಲಿ ಹಕ್ಕಿಗೆ ಯಾವುದೇ ಕೊರತೆಯಿರಲಿಲ್ಲ. ಸಮಯಕ್ಕೆ ಸರಿಯಾಗಿ ಸಾಕಷ್ಟು ಕಾಳು, ನೀರಿನ ವ್ಯವಸ್ಥೆಯಿತ್ತು.

ರಾಜ ಹಾಗೂ ರಾಣಿಯರು ಆ ಹಕ್ಕಿಯನ್ನು ಮುದ್ದಾಗಿ ಸಾಕುತ್ತಿದ್ದರು ಮತ್ತು ಅದರೊಂದಿಗೆ ಪ್ರತಿದಿನ ಮಾತನಾಡುತ್ತಿದ್ದರು. ಆದರೂ ಹಕ್ಕಿಗೆ ತಾನು ತನ್ನ ಪರಿವಾರದಿಂದ ದೂರವಿರುವುದರ ಕುರಿತು ಸಾಕಷ್ಟು ನಿರಾಸೆಯಿತ್ತು.

ಒಂದೆರಡು ತಿಂಗಳುಗಳು ಉರುಳಿದ ನಂತರ ರಾಜನು ಪುನಃ ಹಕ್ಕಿಯು ದೊರೆತ ಸ್ಥಳಕ್ಕೆ ಬೇಟೆಗೆ ಹೋಗುವುದಾಗಿ ನಿರ್ಧರಿಸಿದನು ಮತ್ತು ಹಕ್ಕಿಯ ಬಳಿಗೆ ಹೋಗಿ “ನಾನು ಪುನಃ ನಿನ್ನ ಕುಟುಂಬವಿರುವ ಸ್ಥಳಕ್ಕೆ ಹೋಗುತ್ತಿದ್ದು ಅಲ್ಲಿರುವ ನಿನ್ನ ಕುಟುಂಬದವರಿಗೆ ಏನಾದರೂ ಹೇಳಬೇಕಾದರೆ ತಿಳಿಸು, ಹೇಳುವೆ’ ಎಂದನು. ಅದಕ್ಕೆ ಹಕ್ಕಿಯು “ನಾನಿಲ್ಲಿ ಬಂಗಾರದ ಪಂಜರದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ತಿಂದು ಆಟವಾಡುತ್ತಾ ಸುಖವಾಗಿರುವುದಾಗಿದ್ದೇನೆಂದು ತಿಳಿಸಿ’ ಎಂದು ಹೇಳಿಕಳುಹಿಸಿತು. ಅದರಂತೆ ರಾಜನು ಕಾಡಿಗೆ ತೆರಳಿ ಅಲ್ಲಿರುವ ಹಕ್ಕಿಯ ಪರಿವಾರವನ್ನು ಕೂಗಿ ಕರೆದು ತನ್ನ ಅರಮನೆಯಲ್ಲಿರುವ ಮರಿಹಕ್ಕಿಯು ಹೇಳಿದ ಸಮಾಚಾರವನ್ನು ತಿಳಿಸಿದನು. ಅದನ್ನು ಕೇಳಿದ ಹಕ್ಕಿಗಳ ಬಳಗದಲ್ಲಿದ್ದ ಹಿರಿಯ ಹಕ್ಕಿಯೊಂದು ಕಣ್ಣೀರು ಸುರಿಸುತ್ತಾ ದುಃಖದಿಂದ ಸ್ವಲ್ಪ ಮೇಲಕ್ಕೆ ಹಾರಿ ಮತ್ತೆ ಕೆಳಗೆ ಕುಸಿದು ಬಿದ್ದು ಮರಣವನ್ನಪ್ಪಿತು. ಇತರೆ ಹಕ್ಕಿಗಳೆಲ್ಲವೂ ಅದರ ಸುತ್ತಲೂ ಕುಳಿತು ಅಳಲಾರಂಭಿಸಿದವು. ಇದನ್ನೆಲ್ಲಾ ನೋಡಿದ ರಾಜನು ಅಲ್ಲಿಂದ ಕೂಡಲೇ ಅರಮನೆಗೆ ಹಿಂದಿರುಗಿ ತನ್ನ ಪಂಜರದಲ್ಲಿದ್ದ ಹಕ್ಕಿಮರಿಯ ಬಳಿ ನಡೆದುದನ್ನೆಲ್ಲವನ್ನೂ ತಿಳಿಸಿದನು. ಕೂಡಲೇ ಮರಿಹಕ್ಕಿಯೂ ಕಣ್ಣೀರು ಸುರಿಸಿ ಪಂಜರದೊಳಗೇ ಹಾರಲು ಪ್ರಯತ್ನಿಸಿ ಕೆಳಗೆ ಬಿದ್ದು ಸತ್ತುಹೋಯಿತು. ಎರಡೂ ಘಟನೆಗಳಿಂದ ವಿಚಲಿತನಾದ ರಾಜನು ಬಹುಶಃ ಇವೆರೆಡೂ ಹಕ್ಕಿಗಳು ಸಂಬಂಧಿಗಳಿರಬೇಕೆಂದು ತಿಳಿದು ತಾನು ಅದರ ಸಂಬಂಧಿ ಸಾವನ್ನಪ್ಪಿದ್ದನ್ನು ತಿಳಿಸಬಾರದಿತ್ತು ಎಂದು ನೊಂದು ಕಣ್ಣೀರು ಸುರಿಸಿದನು. ಪಂಜರದಿಂದ ಮರಿಹಕ್ಕಿಯನ್ನು ಹೊರತೆಗೆದು ಅಂತ್ಯಸಂಸ್ಕಾರ ಮಾಡಬೇಕೆಂದು ಅರಮನೆಯ ಉದ್ಯಾನಕ್ಕೆ ತಂದನು. ಅಲ್ಲಿಗೆ ತಂದೊಡನೆಯೇ ಮರಿಹಕ್ಕಿಯು ಎದ್ದು ಹಾರಿಹೋಗಿ ಸಮೀಪದಲ್ಲಿಯೇ ಇದ್ದ ಮರವೊಂದರ ಮೇಲೆ ಕುಳಿತು ಹೇಳಿತು ಮಹಾರಾಜ, “ಕಾಡಿನಲ್ಲಿ ಹಿರಿಯ ಹಕ್ಕಿಯು ಸಾಯಲಿಲ್ಲ. ಅದು ಪಂಜರದಲ್ಲಿರುವ ನಾನು ತಪ್ಪಿಸಿಕೊಳ್ಳುವ ಉಪಾಯವನ್ನು ನಿನ್ನ ಮೂಲಕ ನನಗೆ ರವಾನಿಸಿತು ಅಷ್ಟೇ. ನೀನು ನನ್ನನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡು ಮುದ್ದು ಮಾಡಿದರೂ ಸಹ ನನಗೆ ಸ್ವತಂತ್ರವಾಗಿ ಹಾರಾಡುತ್ತಾ ಜೀವಿಸುವುದೇ ಇಷ್ಟ. ಇನ್ನು ಮುಂದೆ ಯಾವತ್ತೂ ಯಾವುದೇ ಪಾಣಿಯನ್ನೂ ಬೇಟೆಯಾಡಿ ಕೊಲ್ಲುವ ಪ್ರಯತ್ನ ಮಾಡಬೇಡ. ನಮಗೂ ಬದುಕಲು ಬಿಡು’ ಎಂದು ಹೇಳಿ ಹಾರಿಹೋಯಿತು. ಹಕ್ಕಿಯ ಮಾತಿನ ಮರ್ಮ ಅರಿತ ಮಹಾರಾಜನು ಅಂದಿನಿಂದ ಬೇಟೆಯಾಡುವುದನ್ನು ತೊರೆದು ಪ್ರಾಣಿಪಕ್ಷಿಗಳನ್ನೂ ಪ್ರೀತಿಸುವುದನ್ನು ಕಲಿತನು.

 - ಪ.ನಾ.ಹಳ್ಳಿ ಹರೀಶ್‌ ಕುಮಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next