ಹಾನಗಲ್ಲ: ವಿವಿಧ ಬೇಡಿಕೆ ಈಡೇರಿಕೆಗಾಗಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಜು. 9ರಂದು ಹಾವೇರಿಯಲ್ಲಿ ಬೃಹತ್ ರ್ಯಾಲಿ ಮೂಲಕ ಶಿಕ್ಷಕರ ಶಕ್ತಿ ಪ್ರದರ್ಶನ ಮಾಡಿ ಹಕ್ಕೊತ್ತಾಯ ಮಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಅಂದು ಎಲ್ಲ ಶಿಕ್ಷಕರು ಪಾಠ ಬಹಿಷ್ಕರಿಸಿ ಪಾಲ್ಗೊಳ್ಳಲಿದ್ದಾರೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು ಶಿಕ್ಷಕರ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲಾಗಿತ್ತು. ಆದರೆ, ಸರಕಾರ ಕ್ರಮ ಕೈಗೊಳ್ಳದ್ದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು.
ರಾಜ್ಯದಲ್ಲಿ ಇಂಥ 86 ಸಾವಿರ ಶಿಕ್ಷಕರಿದ್ದರೂ ಸರ್ಕಾರ ಅವರನ್ನು ಪರಿಗಣಿಸುತ್ತಿಲ್ಲ. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಮುಂದುವರಿಸಬೇಕು. ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವರ್ಗಾವಣೆ ಪ್ರಕ್ರಿಯೆ ಹಲವು ಗೊಂದಲಗಳನ್ನು ಸೃಷ್ಟಿಸಿದ್ದು, ಅವುಗಳನ್ನು ಪರಿಹರಿಸಬೇಕು. ವಿದ್ಯಾರ್ಥಿ ಶಿಕ್ಷಕ ಅನುಪಾತ ಗುರುತಿಸುವಾಗ ಮುಖ್ಯೋಪಾಧ್ಯಾಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಿಟ್ಟು ಪರಿಗಣಿಸಬೇಕು. 6ನೇ ವೇತನ ವರದಿ ಶಿಫಾರಸು ಆಧರಿಸಿ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ವಿಷಯ ಕುರಿತು ವಿವರಿಸಿದರು.
ಕಾರ್ಯದರ್ಶಿ ಬಿ.ಎಸ್.ಚಲ್ಲಾಳ, ಎಂ.ಎಸ್.ಬಡಿಗೇರ, ಎ.ವೈ.ಕಿತ್ತೂರ, ಎಂ.ಬಿ.ವಡೆಯರ, ಎಸ್.ಎನ್.ಸಾವಳಗಿ, ಜಿ.ಕೆ.ಶಂಕರ, ಜಿ.ಎಫ್.ಇದ್ಲಿ, ಎಸ್.ಎಂ.ದೊಡ್ಡಮನಿ, ಎಸ್.ಜಿ.ಭಂಡಾರಿ, ಸಾವಿತ್ರಿ ಗೊಂದಿ, ಪಿ.ಎಚ್.ಹಿರೇಗೌಡ್ರ, ಎಂ.ಎ.ಜಾಗೀರದಾರ, ಎಚ್.ಪ್ರಭಾವತಿ, ವಾಗೀಶ ಇದ್ದರು.