Advertisement

ಸರಕಾರಿ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ : ಅಂಕಿ ಅಂಶದಿಂದ ಮಾಹಿತಿ ಬಹಿರಂಗ

03:36 PM Feb 21, 2022 | Team Udayavani |

ಪುತ್ತೂರು : ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕಿನ ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್‌ ಲಾಕ್‌ಡೌನ್‌ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

Advertisement

ಎರಡು ವರ್ಷದ ಹಿಂದಿನ ಹಾಗೂ ಈ ವರ್ಷ ಹಾಸ್ಟೆಲ್‌ಗ‌ಳಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ತುಲನೆ ಮಾಡಿದರೆ ಅಂಕಿ ಅಂಶ ಇದನ್ನು ಸ್ಪಷ್ಟಪಡಿಸುತ್ತದೆ. ವರ್ಷದಿಂದ ವರ್ಷಕ್ಕೆ ಒಟ್ಟು ಬಲಾಬಲ ಇಳಿಕೆ ತೋರಿಸುತ್ತಿದೆ.

261ರಿಂದ 100ಕ್ಕೆ ಕುಸಿತ
ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು ಐದು ವಿದ್ಯಾರ್ಥಿ ನಿಲಯಗಳಿವೆ. ಇದರಲ್ಲಿ ಮೆಟ್ರಿಕ್‌ ಪೂರ್ವ ನಾಲ್ಕು ಹಾಗೂ ಮೆಟ್ರಿಕ್‌ ಅನಂತರದ ಒಂದು ವಿದ್ಯಾರ್ಥಿ ನಿಲಯ ಇದೆ. ಐದು ಹಾಸ್ಟೆಲ್‌ಗ‌ಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಾಮರ್ಥ್ಯ ಸಂಖ್ಯೆ 390. ಆದರೆ ಆ ಸಂಖ್ಯೆ ಕೋವಿಡ್‌ ಪೂರ್ವದಲ್ಲಿಯೂ ಭರ್ತಿ ಆಗಿಲ್ಲ. 2018-19ರಲ್ಲಿ 261, 2019-21ರಲ್ಲಿ 267 ವಿದ್ಯಾರ್ಥಿಗಳಿದ್ದರು. ಕೋವಿಡ್‌ ಬಾಧಿಸಿದ 2020-21ರಲ್ಲಿ 136, 2021-22ರಲ್ಲಿ 101ಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ಅಂದರೆ 2018-19 ಕ್ಕೆ ಹೋಲಿಸಿದರೆ 2021-22 ರಲ್ಲಿ 150ರಷ್ಟು ವಿದ್ಯಾರ್ಥಿಗಳು ಕಡಿಮೆ ದಾಖಲಾಗಿದ್ದಾರೆ.

ಆಹಾರದ ದಾಸ್ತಾನಿದೆ
ರಾಜ್ಯದ ನಾನಾ ಹಾಸ್ಟೆಲ್‌ಗ‌ಳಲ್ಲಿ ಪಡಿತರ ಪೂರೈಕೆಯಲ್ಲಿ ವ್ಯತ್ಯಯವಾಗಿ ವಿದ್ಯಾರ್ಥಿಗಳು ಆಹಾರಕ್ಕಾಗಿ ಪರದಾಡುತ್ತಿದ್ದರೆ ಪುತ್ತೂರು, ಕಡಬ ತಾಲೂಕಿನಲ್ಲಿ ಈ ಸಮಸ್ಯೆ ಇಲ್ಲ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಅಕ್ಕಿ, ಗೋಧಿ ಸರಬರಾಜು ಸಾಕಾಗುತ್ತಿದೆ. ಪ್ರಸ್ತುತ ಹೆಚ್ಚುವರಿಯಾಗಿ ಆಹಾರ ಸಾಮಗ್ರಿ ದಾಸ್ತಾನು ಇದ್ದು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಜತೆಗೆ ಅಂಬೇಡ್ಕರ್‌ ವಸತಿ ಶಾಲೆಗೂ ಆಹಾರ ಸಾಮಗ್ರಿ ಪೂರೈಸಲಾಗಿದೆ.

ಹೆಚ್ಚುವರಿ ದಾಸ್ತಾನು
ಪುತ್ತೂರು, ಕಡಬದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಊಟ, ಉಪಾಹಾರಕ್ಕೆ ಬೇಕಾಗಿರುವ ಆಹಾರದ ಕೊರತೆ ಉಂಟಾಗಿಲ್ಲ. ಇಲ್ಲಿ ಹೆಚ್ಚುವರಿ ದಾಸ್ತಾನು ಇದೆ.
-ಲಕ್ಷ್ಮೀದೇವಿ, ಸಹಾಯಕ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಪುತ್ತೂರು

Advertisement

ಸಂಖ್ಯೆ ಇಳಿಕೆ
ಕೋವಿಡ್‌ ಪೂರ್ವದಲ್ಲಿ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಲಾಕ್‌ಡೌನ್‌ ಅನಂತರ ಸಂಖ್ಯೆ ಇಳಿಕೆ ಕಂಡಿದೆ. ಪುತ್ತೂರು, ಕಡಬ ತಾಲೂಕಿನ ಐದು ಹಾಸ್ಟೆಲ್‌ಗ‌ಳಲ್ಲಿ ಒಟ್ಟು 101 ವಿದ್ಯಾರ್ಥಿಗಳಿದ್ದಾರೆ.
-ಕೃಷ್ಣ, ವ್ಯವಸ್ಥಾಪಕ, ಸಮಾಜ ಕಲ್ಯಾಣ ಇಲಾಖೆ, ಪುತ್ತೂರು

ಸಮಾನ ಹಂಚಿಕೆ
ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದ ಪ್ರತೀ ವಿದ್ಯಾರ್ಥಿಗೆ ತಿಂಗಳಿಗೆ 1,500 ರೂ. ಹಾಗೂ ಮೆಟ್ರಿಕ್‌ ಅನಂತರದ ವಿದ್ಯಾರ್ಥಿಗಳಿಗೆ 1,600 ರೂ.ಗಳನ್ನು ಆಹಾರಕ್ಕೆಂದು ಸರಕಾರ ನೀಡುತ್ತಿದೆ. ಪ್ರತೀ ವಿದ್ಯಾರ್ಥಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ನಿಗದಿಪಡಿಸಲಾಗಿದ್ದು ದಿನವೊಂದಕ್ಕೆ ಒಬ್ಬ ವಿದ್ಯಾರ್ಥಿಗೆ ಊಟ, ಉಪಹಾರಕ್ಕೆಂದು 50 ರೂ. ಖರ್ಚು ಮಾಡಲಾಗುತ್ತದೆ. ಇದು ರಾಜ್ಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಒಂದೇ ತೆರನಾಗಿದೆ.

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next