Advertisement

ಸರಕಾರಿ ಕಚೇರಿಗಳಲ್ಲಿ ಕಡಿಮೆ ಸಿಬಂದಿ, ಹೆಚ್ಚು ಕೆಲಸ

11:11 PM Apr 22, 2020 | Sriram |

ಉಡುಪಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರ ಓಡಾಟ ಸಹಜ ವಾಗಿಯೇ ವಿರಳವಾಗಿದೆ. ಖಾಸಗಿ ವಲಯ ಸಹಿತ ಸರಕಾರಿ ಕಚೇರಿಗಳಿಗೂ ಜನರು ಬೆರಳೆಣಿಕೆಯ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್-19 ವೈರಸ್‌ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯಮಟ್ಟದ ಕಚೇರಿಗಳಲ್ಲಿ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿ ಸುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳಿಗೆ ಶೇ.33ರಷ್ಟು ಸಿಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.

ಸರಕಾರಿ ನಿಗಮ, ಮಂಡಳಿ, ಪ್ರಾಧಿಕಾರ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದಗಳ ಎಲ್ಲ ಅಧಿಕಾರಿಗಳು ಮತ್ತು ಗ್ರೂಪ್‌-ಸಿ ಮತ್ತು ಗ್ರೂಪ್‌-ಡಿ ವೃಂದಗಳ ಶೇ.33ರಷ್ಟು ಸಿಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಇ-ಆಡಳಿತ), ಆರ್ಥಿಕ ಇಲಾಖೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ತೋಟಗಾರಿಕೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವರ್ಗದ ಅಧಿಕಾರಿಗಳು ಸಿಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪಾಸ್‌ ಕೇಳಿ ಬರುವವರೇ ಅಧಿಕ
ತರಕಾರಿ, ಹಣ್ಣುಹಂಪಲುಗಳನ್ನು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಸಾಗಾಟ ಮಾಡಲು ಸಹಿತ ಪಾಸ್‌ಗಳ ವಿಚಾರಣೆ ಗೆಂದು ತಾಲೂಕು ಕಚೇರಿಗಳಿಗೆ ಹಲವಾರು ಮಂದಿ ಭೇಟಿ ನೀಡುತ್ತಿದ್ದರು. ಆದರೆ ಪಾಸ್‌ಗಳು ಕಡ್ಡಾಯವಲ್ಲ ಎಂಬ ಸೂಚನೆ ಬಂದ ಮೇಲೆ ಅನಗತ್ಯವಾಗಿ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಕೂಡ ಕೆಲವರು ಬೆಳೆಗಳ ಮಾಹಿತಿ, ಅದರ ಸಾಗಾಟದ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ತಾ| ಕಚೇರಿಯಿಂದ ಜಿಲ್ಲಾ ಕಚೇರಿಗೆ
ಕೃಷಿ ಉತ್ಪನ್ನ ಮಾರುಕಟ್ಟೆ, ತೋಟಗಾರಿಕೆ ಸಹಿತ ಪಾಸ್‌ ಉದ್ದೇಶಕ್ಕೆ ಬರುವವರು ತಾಲೂಕು ಕಚೇರಿಯಲ್ಲಿ ಮಾಹಿತಿಗಳನ್ನು ಪಡೆದುಕೊಂಡು ಅಲ್ಲಿ ಅನುಮತಿ ನೀಡಿದ ಬಳಿಕ ಜಿಲ್ಲಾ ಕಚೇರಿಗೆ ತೆರಳಬಹುದಾಗಿದೆ. ಸಣ್ಣ ಪುಟ್ಟ ಕಾರಣಗಳಿಗೋಸ್ಕರ ಜಿಲ್ಲಾಧಿಕಾರಿ ಕಚೇರಿಯೊಳಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ನೇರವಾಗಿ ಭೇಟಿ ನೀಡಿದವರ ಕಾರಣವೂ ಮಹತ್ವದ್ದಾಗಿದ್ದರೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ.

Advertisement

ಅನಗತ್ಯ ಸಂಚಾರ ಬೇಡ
ತುರ್ತು ಕೆಲಸಗಳಿದ್ದರೆ ಮಾತ್ರ ಕಚೇರಿಗೆ ಬರುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಸಣ್ಣಪುಟ್ಟ ಕೆಲಸಗಳಿಗೆ ಅನಗತ್ಯವಾಗಿ ಸಂಚಾರ ಮಾಡಬಾರದು. ಅಗತ್ಯ ಸೇವೆಗಳನ್ನು ನಿರ್ವಹಿಸುವ ಇಲಾಖೆಗಳ‌ನ್ನು ಹೊರತುಪಡಿಸಿ ಉಳಿದೆಡೆ ಶೇ. 33ರಷ್ಟು ಸಿಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
-ಜಿ. ಜಗದೀಶ್‌, ಜಿಲ್ಲಾಧಿಕಾರಿಗಳು

ಆಟೋರಿಕ್ಷಾಗಳು ಚಾಲು?
ಉಡುಪಿ: ಲಾಕ್‌ಡೌನ್‌ ವಿಧಿಸಿದ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ 11ರ ತನಕ ಅವಕಾಶವಿದೆ. ಅಗತ್ಯ ಸೇವೆಗಳ ಖರೀದಿ ಸಮಯದಲ್ಲಿ ಕೆಲವು ನಾಗರಿಕರು ಆಟೋರಿಕ್ಷಾಗಳ ನೆರವು ಪಡೆಯುತ್ತಿದ್ದಾರೆ. ಇನ್ನು ಕೆಲ ಆಟೋ ರಿಕ್ಷಾದವರು ಸ್ವತಃ ಸಾಮಗ್ರಿ ಖರೀದಿಗೆ ಅಂಗಡಿಗೆ ತಮ್ಮ ಆಟೋ ರಿಕ್ಷಾಗಳಲ್ಲಿ ಬರುತ್ತಾರೆ. ಅದರಂತೆ ಬುಧವಾರ ಬೆಳಗ್ಗೆ ಅಲೆವೂರು ರಿಕ್ಷಾ ನಿಲ್ದಾಣಕ್ಕೆ ಪರಿಸರದ ರಿಕ್ಷಾಗಳು ಬಂದಿದ್ದು, ನಿಲ್ದಾಣದಲ್ಲಿ ಏಳೆಂಟು ರಿಕ್ಷಾಗಳು ನಿಂತಿರುವುದು ಕಂಡುಬಂತು.

45 ಸಿಬಂದಿ ಕರ್ತವ್ಯ
ತಹಶೀಲ್ದಾರ್‌ ಕಚೇರಿಯಲ್ಲಿ ಎ.20ರ ವರೆಗೆ ಶೇ.33 ಸಿಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಶೇ.90ರಷ್ಟು ಸಿಬಂದಿ ಹಾಜರಾಗುತ್ತಿದ್ದಾರೆ. ಕೆಲವರಿಗೆ ನಿರಾಶ್ರಿತ ಕೇಂದ್ರದ ಉಸ್ತುವಾರಿ, ವಲಸೆ ಕಾರ್ಮಿಕರಿಗೆ ಕಿಟ್‌ ವಿತರಣೆ ಜವಾಬ್ದಾರಿ ವಹಿಸಲಾಗಿದೆ. ಉಳಿದವರಿಗೆ ಹಳೇ ಕಡತಗಳ ವಿಲೇವಾರಿಗೆ ಸೂಚಿಸಲಾಗಿದೆ. 45 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ತಿಳಿಸಿದ್ದಾರೆ.

ಆನ್‌ಲೈನ್‌ ಮೊರೆ
ತೆರಿಗೆ ಪಾವತಿ, ಮೆಸ್ಕಾಂ ಬಿಲ್‌ ಪಾವತಿ ಮುಂತಾದ ಕೆಲಸಗಳಿಗೆ ಜನರು ಆನ್‌ಲೈನ್‌ ಮೂಲಕವೇ ಹಣ ಪಾವತಿ ಮಾಡುತ್ತಿದ್ದಾರೆ. ಕೆಲವರು ಮಾತ್ರ ನಿಗದಿತ ಅವಧಿಯಲ್ಲಿ ಬಂದು ಪಾವತಿ ಮಾಡುತ್ತಿದ್ದಾರೆ. ಬೆಳಗ್ಗೆ 11ರ ಅನಂತರ ಜನಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಜನರು ಕೂಡ ಹೊರಗಡೆ ಬರುತ್ತಿಲ್ಲ. ಆ ಸಂದರ್ಭದಲ್ಲಿ ಬೇರೆ ರೀತಿಯ ಲೆಕ್ಕಾಚಾರದಂತಹ ಕೆಲಸಗಳನ್ನು ನಾವು ನಿರ್ವಹಿಸುತ್ತೇವೆ ಎನ್ನುತ್ತಾರೆ ಇಲ್ಲಿನ ಸಿಬಂದಿ.

ಕುಂದಾಪುರ: ನಗರ ಪ್ರವೇಶಕ್ಕೆ ಎರಡೇ ದಾರಿ
ಕುಂದಾಪುರ: ಮಂಗಳವಾರ ನಗರದಲ್ಲಿ ವಾಹನಗಳ ಎರ್ರಾಬಿರ್ರಿ ಓಡಾಟಕ್ಕೆ ಕಡಿವಾಣ ಹಾಕಿದ್ದ ಪೊಲೀಸರು ಬುಧವಾರ ಎಂದಿನಂತೆ ನಿತ್ಯದ ಓಡಾಟಕ್ಕೆ ಅನುವು ಮಾಡಿದ್ದರು. ಆದರೆ ಮಂಗಳವಾರದ ಬಿಸಿ ಬುಧವಾರವೂ ಮುಂದುವರಿದ ಕಾರಣ ವಾಹನಗಳ ಓಡಾಟದ ಸಂಖ್ಯೆಯಲ್ಲಿ ಕಡಿವಾಣ ಇತ್ತು. ಸಣ್ಣಪುಟ್ಟ ಕಾರಣಗಳಿಗೆ ಜನ ಬರುವುದು ನಿಂತಿದೆ.

ನಗರ ಪ್ರವೇಶಕ್ಕೆ ಎರಡೇ ದಾರಿಗಳನ್ನು ಬಿಡಲಾಗಿದೆ. ಸಂಗಮ್‌ ಬಳಿ ಹಾಗೂ ಶಾಸಿŒ ಸರ್ಕಲ್‌ ಬಳಿ ಮಾತ್ರ ವಾಹನಗಳಿಗೆ ಒಳಪ್ರವೇಶ ಹಾಗೂ ಹೊರ ಹೋಗಲು ಅವಕಾಶ ಇದೆ. ಇತರ ಎಲ್ಲ ರಸ್ತೆಗಳಿಗೂ ಬ್ಯಾರಿಕೇಡ್‌ ಹಾಕಿ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ವಾಹನಗಳ ಓಡಾಟದ ದಟ್ಟಣೆ ತತ್‌ಕ್ಷಣವೇ ಅರಿವಿಗೆ ಬರುತ್ತದೆ. ಇದು ಮುಂದಿನ ದಿನಗಳಲ್ಲಿ ವಾಹನ ಗಳ ಓಡಾಟಕ್ಕೆ ಕಡಿವಾಣ ಹಾಕಲು ನೆರವಾಗಲಿದೆ ಎನ್ನುವುದು ಇಲಾಖೆ ಲೆಕ್ಕಾಚಾರ. ಮೀನು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆಯಾಗಿದ್ದರೂ ಜನದಟ್ಟಣೆ ಮಾತ್ರ ಹಾಗೆಯೇ ಇರುತ್ತದೆ. ಜನ ಒಟ್ಟಾಗಿ ಗುಂಪು ಸೇರುವುದು ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next