Advertisement

ಗಿಜಿಗುಡಬೇಕಿದ್ದ  ಮಲೆಯಲ್ಲಿ  ಭಕ್ತರೇ ಇಲ್ಲ

03:59 AM Jan 11, 2019 | |

ಶಬರಿಮಲೆ: ಮಕರ ಸಂಕ್ರಮಣ ಹತ್ತಿರ ಬರುತ್ತಿದ್ದಂತೆ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಆಗುತ್ತಿದ್ದ ಶಬರಿ ಮಲೆಯಲ್ಲಿ ಈ ವರ್ಷ ಭಕ್ತರ ಸಂಖ್ಯೆ ವಿಪರೀತ ಕುಸಿತ ಕಂಡಿದೆ. ವಾವರ ಮಸೀದಿ ಸುತ್ತಮುತ್ತ ನಡೆಯುತ್ತಿದ್ದ ಬೇಟೆ ತುಲ್ಲಾವನ್ನೇ ಗಮನಿಸುವುದಾದರೆ, ಈ ಹಿಂದಿನ ವರ್ಷಗಳಲ್ಲಿ ವಿಪರೀತ ದಟ್ಟಣೆ ಕಂಡುಬರುತ್ತಿತ್ತು. ಆದರೆ ಈ ಬಾರಿ ಬೆರಳೆಣಿಕೆಯ ಭಕ್ತರಿದ್ದಾರೆ.

Advertisement

“ಈ ಬಾರಿ ತುಂಬಾ ಆರಾಮವಾಗಿ ಬೇಟೆ ತುಲ್ಲಾ ನಡೆಸಿದ್ದೇವೆ’ ಎಂದು ಹಲವು ಭಕ್ತರು ತಿಳಿಸಿದ್ದಾರೆ. ಮುಂದೆ “ಮಲೆ ಚೌಟು’ವ (ಅಯ್ಯಪ್ಪ ಸ್ವಾಮಿ ನಡೆದುಕೊಂಡು ಹೋದ ದಾರಿ) ಕಾಡು ಹಾದಿಯ ಇಕ್ಕೆಲಗಳಲ್ಲಿ ನೂರಾರು ತಾತ್ಕಾಲಿಕ ಬೀರಿಗಳು ಎದುರಾಗುತ್ತವೆ. ಇಲ್ಲಿ ಆಹಾರ ಸೇವನೆ ಜತೆಗೆ ವಿಶ್ರಾಂತಿಗೂ ಅವಕಾಶವಿದೆ. ಕೇವಲ 14 ದಿನಗಳಲ್ಲಿ ಬೀರಿ (ಅಂಗಡಿ) ನಡೆಸುವ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಆದರೆ ಈ ವರ್ಷ ಬೀರಿಗಳೆಲ್ಲ ಬಿಕೋ ಎನ್ನುತ್ತಿವೆ. ವ್ಯಾಪಾರದ ಕೊರತೆ ಎದುರಿಸುತ್ತಿರುವ ವ್ಯಾಪಾರಿಗಳು, ಇರುವ ಭಕ್ತರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. “ಮಲೆ ಚೌಟು’ವನ್ನುತುಂಬಾ ಆರಾಮವಾಗಿ ನಡೆಸಲು ಸಾಧ್ಯವಾಗುತ್ತಿದೆ. ಒಂದಷ್ಟು ಭಕ್ತರು “ಮಲೆ ಚೌಟ’ದೆ ನೇರವಾಗಿ ಪಂಬಾಗೆ ಆಗಮಿಸಿ, ಇಲ್ಲಿಂದ ಮುಂದಿನ 8 ಕಿಲೋ ಮೀಟರ್‌ ಹಾದಿಯನ್ನು ಕ್ರಮಿಸುತ್ತಾರೆ. ಇಲ್ಲಿನ ನೀಲಿಮಲೆ, ಗಣೇಶ ಬೆಟ್ಟಗಳಲ್ಲೂ ಈಗ ಆರಾಮವಾಗಿ ನಡೆದುಕೊಂಡು ಹೋಗಬಹುದು. ಪ್ರತಿದಿನ ಶಬರಿಮಲೆಯಲ್ಲಿ ಅನ್ನದಾನ ನಡೆಯುತ್ತದೆ. ಅನ್ನ ಪ್ರಸಾದ ಸೇವಿಸಿದವರ ಸಂಖ್ಯೆಯನ್ನೇ ಗಮನಿಸುವುದಾದರೆ, ಇದರ ಸಂಖ್ಯೆ 1.5 ಲಕ್ಷ ಮೀರುವುದಿಲ್ಲ.

ಸರತಿ ಸಾಲಿಲ್ಲ
ಮಕರ ಸಂಕ್ರಮಣದ ಸಂದರ್ಭ ಭಾರೀ ಸರತಿ ಸಾಲು ಸಾಮಾನ್ಯ. ಕೆಲವು ವರ್ಷಗಳಲ್ಲಿ ನೀಲಿಮಲೆ ಬೆಟ್ಟದಿಂದಲೇ ಕ್ಯೂ ಇದ್ದ ಉದಾಹರಣೆಗಳೂ ಇವೆ. ಭಾರೀ ಸಂಖ್ಯೆಯ ಜನರನ್ನು ನಿಯಂತ್ರಿಸಲು ಒಂದೊಂದು ಕೊಠಡಿಗಳಾಗಿ ಮಾಡಿ, ಭಕ್ತರನ್ನು ಮುಂದೆ ಬಿಡಲಾಗುತ್ತದೆ. ಆದರೆ ಈ ವರ್ಷ ಕೊಠಡಿ ವಿಷಯ ಬಿಡಿ, 18 ಪಡಿ (ಮೆಟ್ಟಿಲು) ಗಳನ್ನು ಕೂಡ ಸುಲಲಿತ ವಾಗಿ ಏರಬಹುದು. ಒತ್ತಡಕ್ಕೆ ಒಳಗಾಗದ ಪೊಲೀಸರು ಮುಂದೆ ತಳ್ಳುವ ಕಾಯಕ ಮಾಡುವುದೇ ಇಲ್ಲ, ವಿನಯದಿಂದ ಪಡಿ ಹತ್ತಲು ಸಹಕರಿಸುತ್ತಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 60ರಷ್ಟು ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಮೊದಲೆಲ್ಲ ರಾತ್ರಿ ಪೂರ್ತಿ ಬೀರಿಗಳು ತೆರೆದಿರುತ್ತಿದ್ದವು. ಅಂದರೆ ರಾತ್ರಿಯಿಡೀ ದೊಡ್ಡ ಸಂಖ್ಯೆಯ ಭಕ್ತರು ನಡೆದು ಹೋಗುತ್ತಿದ್ದರು. ಆದರೆ ಈ ವರ್ಷ ಸರಿರಾತ್ರಿಯಲ್ಲಿ ಹಲವು ಅಂಗಡಿಗಳವರು ಬಾಗಿಲು ಮುಚ್ಚುವ ಪ್ರಸಂಗ ಎದುರಾಗಿದೆ.
ಧರ್ಮೇಶ್‌ ಅಲುದಾ, ವ್ಯಾಪಾರಿ

 ಗಣೇಶ್‌ ಎನ್‌. ಕಲ್ಲರ್ಪೆ

Advertisement
Advertisement

Udayavani is now on Telegram. Click here to join our channel and stay updated with the latest news.

Next