ಬೆಂಗಳೂರು: ಒಂದರಿಂದ ಹತ್ತು ವಿದ್ಯಾರ್ಥಿಗಳಿರುವ ರಾಜ್ಯದ 3,594 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿಲೀನಕ್ಕೆ ಸರಕಾರ ಮುಂದಾಗಿದೆ. ಆದರೆ ಶೂನ್ಯ ದಾಖಲಾತಿ ಇರುವ 261 ಪ್ರಾಥಮಿಕ ಹಾಗೂ 57 ಹಿರಿಯ ಪ್ರಾಥಮಿಕ ಶಾಲೆಗಳ ಕಥೆ ಏನು? ಶೂನ್ಯ ದಾಖಲಾತಿ ಹೊಂದಿರುವ 261 ಪ್ರಾಥಮಿಕ ಶಾಲೆಗಳಲ್ಲಿ 229 ಶಿಕ್ಷಕರಿದ್ದರೆ, 57 ಹಿರಿಯ ಪ್ರಾಥಮಿಕ ಶಾಲೆಯಲ್ಲಿ 137 ಶಿಕ್ಷಕರಿದ್ದಾರೆ. ಇವರನ್ನು ಎಲ್ಲಿಗೆ ನಿಯೋಜಿಸುವುದು ಎಂಬುದೂ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ. ಈ ಮಧ್ಯೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದರಿಂದ ಮುಂದಿನ ಮೂರು ವರ್ಷಗಳ ಕಾಲ ಹೊಸ ಖಾಸಗಿ ಶಾಲೆಗೆ ಅನುಮತಿ ನೀಡದೆ ಇರುವ ಬಗ್ಗೆಯೂ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ.
1ರಿಂದ 10 ಮಕ್ಕಳ ದಾಖಲಾತಿ ಹೊಂದಿರುವ 3794 ಶಾಲೆಯಲ್ಲಿ 5220 ಶಿಕ್ಷಕರಿದ್ದಾರೆ. 11ರಿಂದ 30 ಮಕ್ಕಳ ದಾಖಲಾತಿ ಹೊಂದಿರುವ 11,077 ಪ್ರಾಥಮಿಕ ಶಾಲೆ, 1541 ಹಿರಿಯ ಪ್ರಾಥಮಿಕ ಶಾಲೆ ಇದ್ದು, ಇದರಲ್ಲಿ 25,232 ಶಿಕ್ಷಕರಿದ್ದಾರೆ. ಹಾಗೆಯೇ 6751 ಸರಕಾರಿ ಶಾಲೆ ಯಲ್ಲಿ ಮಕ್ಕಳ ದಾಖಲಾತಿ 31ರಿಂದ 50 ಸಂಖ್ಯೆಯಷ್ಟಿದೆ. 50ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಗಳ ಸಂಖ್ಯೆ 20 ಸಾವಿರಕ್ಕೂ ಅಧಿಕ ಇರುವುದು ಇಲಾಖೆ ಅಂಕಿ- ಅಂಶಗಳಿಂದ ಸಾಬೀತಾಗಿದೆ.
ರಾಜ್ಯದ 21,486 ಪ್ರಾಥಮಿಕ ಶಾಲೆಗಳಲ್ಲಿ 41,786 ಶಿಕ್ಷಕರು, 22,544 ಹಿರಿಯ ಪ್ರಾಥಮಿಕ ಶಾಲೆ ಗಳಲ್ಲಿ 1,24,153 ಶಿಕ್ಷಕರಿದ್ದಾರೆ. ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಹೀಗಾಗಿ ಸರಕಾರಿ ಶಾಲೆಗಳನ್ನು ಬಲವರ್ಧನೆ ಮಾಡುವುದು ಇಲಾಖೆ ಎದುರು ಇರುವ ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ರಾಜ್ಯದಲ್ಲಿ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡದೇ ಇರುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಖಾಸಗಿ ಶಾಲೆ ತೆರೆಯಲು ಅನು ಮತಿ ಕೋರಿ ಪ್ರಸಕ್ತ ಸಾಲಿನಲ್ಲಿ 2,429 ಅರ್ಜಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬಂದಿವೆ. ಇದರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ 369 ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ 216 ಅರ್ಜಿಗಳಿವೆ. ಈವರೆಗೂ ಒಂದೇ ಒಂದು ಅರ್ಜಿಯನ್ನು ಇಲಾಖೆಯಿಂದ ಮಾನ್ಯ ಮಾಡಿಲ್ಲ.
ಆರ್‌ಟಿಇ ಅಡಿಯಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆ ಸೇರಿ ಕೊಳ್ಳುತ್ತಿದ್ದಾರೆ. ಯಾವುದೇ ರೀತಿಯ ಪೂರ್ಣ ಪ್ರಮಾಣದ ಸೌಲಭ್ಯ ಇಲ್ಲದೆಯೇ ಖಾಸಗಿ ಶಾಲೆಗಳು ಆರಂಭ ವಾಗುತ್ತಿರುವುದಕ್ಕೂ ಕಡಿ ವಾಣಹಾಕಬೇಕಿದೆ. ಜತೆಗೆ ಮಕ್ಕಳ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಳ್ಳ ಬೇಕಾಗು ತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಖಾಸಗಿ ಶಾಲೆಗೆ ಇನ್ನೂ ಅನುಮತಿ ನೀಡಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯ ವಾಣಿ’ಗೆ ಮಾಹಿತಿ ನೀಡಿದರು.