Advertisement

ಅಶ್ವತ್ಥಪುರ: ಉರುಳಿಗೆ ಸಿಲುಕಿದ ಚಿರತೆ, ಪಿಲಿಕುಳ ನಿಸರ್ಗಧಾಮಕ್ಕೆ ರವಾನೆ

11:55 PM Aug 06, 2019 | mahesh |

ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯ ಅಶ್ವತ್ಥಪುರ ಬೇರಿಂಜದಲ್ಲಿ ಹಂದಿಗೆಂದು ಇರಿಸಿದ್ದ ಉರುಳಿಗೆ ಸಿಲುಕಿದ ಹೆಣ್ಣು ಚಿರತೆಯೊಂದನ್ನು ಅರಣ್ಯ ಇಲಾಖೆ ಹಾಗೂ ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳ ತಂಡ ರಕ್ಷಿಸಿ ಪಿಲಿಕುಳಕ್ಕೆ ಒಪ್ಪಿಸಿದ್ದಾರೆ.

Advertisement

ಅಶ್ವತ್ಥಪುರದಿಂದ ಕೊಪ್ಪದಕುಮೇರಿಗೆ ಹೋಗುವ ರಸ್ತೆಯ ಪಕ್ಕದಲ್ಲಿ, ಬೇರಿಂಜ ಗುಡ್ಡದ ತಪ್ಪಲಿನಲ್ಲಿ ಹಂದಿ ಹಿಡಿಯುವುದಕೋಸ್ಕರ ಯಾರೋ ಇರಿಸಿದ್ದ ಉರುಳಿಗೆ ಮಂಗಳವಾರ ಬೆಳಗ್ಗೆ ಸುಮಾರು ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಬಿದ್ದು ಒದ್ದಾಡುತ್ತಿದ್ದುದನ್ನು ಊರವರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಪಿಲಿಕುಳ ಬಯೋಲಾಜಿಕಲ್ ಥೀಮ್‌ ಪಾರ್ಕ್‌ನ ನಿರ್ದೇಶಕ ಎಚ್. ಜಯಪ್ರಕಾಶ್‌ ಭಂಡಾರಿ ಹಾಗೂ ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್‌ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಪಿಲಿಕುಳ ನಿಸರ್ಗಧಾಮದ ಹಿರಿಯ ವೈಜ್ಞಾನಿಕ ಅಧಿಕಾರಿ, ಅರಿವಳಿಕೆ ತಜ್ಞ ಡಾ| ವಿಕ್ರಂ ಲೋಬೋ ಹಾಗೂ ಪ್ರಾಣಿಪಾಲಕ ದಿನೇಶ್‌ ಬಂದೂಕಿನ ಮೂಲಕ ಅರಿವಳಿಕೆ ಇಂಜೆಕ್ಷನ್‌ ನೀಡಿ, ಚಿರತೆಯ ಪ್ರಜ್ಞೆ ತಪ್ಪಿಸಿದರು. ಬಳಿಕ ಚಿರತೆಯನ್ನು ಹಿಡಿದು ಬೋನಿನಲ್ಲಿ ಹಾಕಿ ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಯಿತು. ಜೋರಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಡಕಾಗಿ ಮಧ್ಯಾ ಹ್ನವರೆಗೂ ಕಾರ್ಯಾಚರಣೆ ನಡೆಯಿತು.

ಉಪವಲಯ ಅರಣ್ಯಾಧಿಕಾರಿ ಅಶ್ವತ್ಥ್ ಗಟ್ಟಿ, ಅರಣ್ಯರಕ್ಷಕರಾದ ಶಂಕರ, ದಿವಾಕರ ವಿನಾಯಕ, ಬಸಪ್ಪ ಸಿಬಂದಿ ಕಾರ್ಯಾಚರಣೆಗೆ ಸಹಕರಿಸಿದರು. ಚಿರತೆ ಕಾರ್ಯಾಚರಣೆ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬೆಳಗ್ಗಿ ನಿಂದ ಮಧ್ಯಾಹ್ನವರೆಗೆ ಸ್ಥಳದಲ್ಲಿ ಜಮಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next