ಕೋಲ್ಕತಾ: ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ಮಡಿಲಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ನರಭಕ್ಷಕ ಚಿರತೆ ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಪಶ್ಚಿಮಬಂಗಾಳದ ಅಲಿಪುರ್ ದೌರ್ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಡಿಸೆಂಬರ್ 12ರಿಂದ ಇದುವರೆಗೆ ಈ ನರಭಕ್ಷಕ ಚಿರತೆ ದಾಳಿಗೆ ಮೂರು ಮಕ್ಕಳು ಬಲಿಯಾದಂತಾಗಿದೆ.
ಚಹಾ ತೋಟದ ತಂತಿ ಬೇಲಿಯಿಂದ ನುಸುಳಿ ಬಂದಿದ್ದ ಚಿರತೆ ತಾಯಿ ತೊಡೆಯ ಮೇಲೆ ಕುಳಿತಿದ್ದ ಪ್ರಣೀತಾ ಓರಾವೊನ್ (3ವರ್ಷ)ಳ ಮೇಲೆ ದಾಳಿ ನಡೆಸಿ ಹೊತ್ತೊಯ್ದಿತ್ತು. ಬುಧವಾರ ಬೆಳಗ್ಗೆ ಮಗುವಿನ ಶವ ಮನೆಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿ ದೊರಕಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಗುವಿನ ತಾಯಿ ಪೂಜಾ ಮಗುವಿನ ರಕ್ಷಣೆಗಾಗಿ ಕೂಗಾಡಿದ್ದರು ಕೂಡಾ ಚಿರತೆ ಅಷ್ಟರಲ್ಲಿ ಮಗುವನ್ನು ಹೊತ್ತೊಯ್ದಿತ್ತು. ಮಗುವಿನ ತಂದೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಹೋಗಿದ್ದರು.
ಚಿರತೆ ಮಗುವಿನ ಕೈ, ಕಾಲು, ತಲೆ ಭಾಗವನ್ನು ತಿಂದು ಹಾಕಿರುವುದಾಗಿ ಹೆಸರು ಹೇಳಲು ಇಚ್ಚಿಸದ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದ ಚಹಾ ಎಸ್ಟೇಟ್ ಸುತ್ತಮುತ್ತ ಇದ್ದ ನೂರಾರು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಗುವಿನ ಕುಟುಂಬಕ್ಕೆ ಉದ್ಯೋಗದ ಭರವಸೆಯನ್ನು ನೀಡಿದ ಮೇಲೆ ಶವವನ್ನು ತೆಗೆಯಲು ಅವಕಾಶ ಮಾಡಿಕೊಟ್ಟಿದ್ದರು ಎಂದು ವರದಿ ತಿಳಿಸಿದೆ.
ಡಿಸೆಂಬರ್ ತಿಂಗಳಿನಲ್ಲಿ 6 ಮತ್ತು 12 ವರ್ಷದ ಬಾಲಕನನ್ನು ಚಿರತೆ ರಾಮ್ ಜೊಹ್ರಾ ಮತ್ತು ಅಲಿಪುರ್ ದೌರ್ ದಲ್ಲಿ ಕೊಂದು ಹಾಕಿತ್ತು ಎಂದು ವರದಿ ವಿವರಿಸಿದೆ.