ಮ೦ಡ್ಯ: ವಿಶ್ವ ಪ್ರಸಿದ್ಧ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯದ ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಮಾಡಲಾಗಿದೆ.
ಶುಕ್ರವಾರ ಸಂಜೆ ಉತ್ತರ ಬೃಂದಾವನ ಕಡೆಯಿಂದ ಫೌಂಟೇನ್ ಬಳಿ ಚಿರತೆಯೂ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಕ್ಷಣ ಎಚ್ಚೆತ್ತ ಸಿಬ್ಬಂದಿಗಳು ಬೃಂದಾವನದಲ್ಲಿದ್ದ ಪ್ರವಾಸಿಗರನ್ನು ವಾಪಸ್ ಕಳುಹಿಸಿ ಬಂದ್ ಮಾಡುವ ಮೂಲಕ ಯಾವುದೇ ಅಪಾಯ ಸಂಭವಿಸದಅತೆ ಕ್ರಮ ವಹಿಸಿದ್ದಾರೆ. ಅ.22ರಂದು ಕೆಆರ್‌ಎಸ್‌ನ ಅಣೆಕಟ್ಟೆ ಮೇಲೆಯೇ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಅಂದು ಸಹ ಬೃಂದಾವನ ಬಂದ್ ಮಾಡಲಾಗಿತ್ತು. ಅಲ್ಲದೆ, ಅಣೆಕಟ್ಟೆ ಮೇಲೆ ಚಿರತೆ ಓಡಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ರಾಯಲ್ ಆರ್ಕಿಡ್ ಹೋಟೆಲ್ ಹಿಂಭಾಗ ಬೋನು ಇರಿಸಿದೆ.
ಆದರೆ ಬೋನಿಗೆ ಬೀಳದ ಚಿರತೆ ಉತ್ತರ ಬೃಂದಾವನ ಬಳಿ ಓಡಾಡುತ್ತಿರುವ ದೃಶ್ಯ ಶುಕ್ರವಾರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆತಂಕ ಸೃಷ್ಟಿಸಿದೆ.