Advertisement

Sirsi: ಬೆಟ್ಟ- ಗುಡ್ಡಗಳಲ್ಲಿ ಚಿರತೆ ಸಂಚಾರ; ಆತಂಕದಲ್ಲಿ ಗ್ರಾಮಸ್ಥರು

03:30 PM Sep 28, 2023 | Team Udayavani |

ಶಿರಸಿ: ಬೆಟ್ಟ ಗುಡ್ಡಗಳಲ್ಲಿ ಚಿರತೆ ಸಂಚರಿಸುತ್ತಿರುವ ಅಂಶ ಬೆಳಕಿಗೆ ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Advertisement

ಇದಕ್ಕೆ ಪುಷ್ಟಿ ನೀಡುವಂತೆ ಆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಸ್ತೆಯಲ್ಲಿ ಕಳೆದ ಎರಡು ಮೂರು ದಿನಗಳ ಹಿಂದೆ ಚಿರತೆಯೊಂದು ಮೂತ್ರ ಮಾಡಿ ಲದ್ದಿ ಹಾಕಿ  ಹೋಗಿರುವುದು ಗ್ರಾಮಸ್ಥರಲ್ಲಿ ಆತಂಕದೊಂದಿಗೆ ಅಚ್ಚರಿಯನ್ನೂ ಮೂಡಿಸಿದೆ.

ಆದರೆ ಈ ಚಿರತೆ ಸಂಚಾರದಿಂದ ಯಾವುದೇ ಸಾಕು ಪ್ರಾಣಿಗಳು ಈ ಚಿರತೆ ಬಾಯಿಗೆ ತುತ್ತಾದ ಅಥವಾ ಕಾಣೆಯಾದ ಬಗ್ಗೆಯಾಗಲೀ ಚಿರತೆಯನ್ನು ನೋಡಿದ್ದರ ಬಗ್ಗೆಯಾಗಲೀ ವರದಿಯಾಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಅಘನಾಶಿನಿ ನದಿ ತಟದಲ್ಲಿರುವ  ಬಾಳಗಾರ, ಬಂದಳಿಕೆ, ಕರೂರು, ಹಳದೋಟ, ಭತ್ತಗುತ್ತಿಗೆ, ದೊಡ್ಡಮನೆ, ಹೂವಿನಮನೆ, ಮುತ್ತಮುರ್ಡು, ಅಡಕಳ್ಳಿ, ಹಿತ್ತಲಕೈ ಮತ್ತಿತರ ಗ್ರಾಮಸ್ತರು ಪರಿಸರ ರಕ್ಷಣೆಗೆ ಒತ್ತು ಕೊಟ್ಟು ತಮ್ಮ ತಮ್ಮ ಬೆಟ್ಟಗಳಲ್ಲಿ ಕಾಡು ಜಾತಿ ಗಿಡಗಳನ್ನು ಬೆಳೆಸಿದ್ದರಿಂದ ಕಾಡು ಪ್ರಾಣಿಗಳಿಗೆ ಇದೊಂದು ಪ್ರಶಸ್ತ ಆವಾಸ ಸ್ಥಾನವಾಗಿ ಪರಿಣಮಿಸುತ್ತಿದೆ.

ಬಾಳಗಾರ ಶಾಲೆ ಹಿಂದಿನ ಕುಮ್ರಿ ಗುಡ್ಡದ ಕಾಡಲ್ಲೇ 2009ರಲ್ಲಿ ಬೇಟೆಗಾರರು ಎರಡು ಚಿರತೆಗಳನ್ನು ಗುಂಡಿಕ್ಕಿ ಹೊಡೆದುರುಳಿಸಿ ದೊಡ್ಡ ಪ್ರಕರಣ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

ಕಳೆದ ಅನೇಕ ವರ್ಷಗಳಿಂದ ಈ ಭಾಗದಲ್ಲಿ ಹುಲಿ, ಚಿರತೆ ಸಂಚಾರವಿದೆ. ಬಾಳಗಾರ ಅಘನಾಶಿನಿ ನದಿ ತಟದ ಮಾರಿಗದ್ದೆ ಹೊಳೆಯಿದಿಂದ ಬಾಳಗಾರ ಗಾಳಿಗುಡ್ಡ, ಜೋಗಿಮನೆ ಸಮೀಪದ ಕೆರೆ ಮೂಲೆ ಬೆಟ್ಟ, ಶಾಲೆಯ ಹಿಂಭಾಗದ ಕವಲುಗುಡ್ಡ, ಕುಮ್ರಿ  ಗುಡ್ಡ, ತಗ್ಗಿನ ಬಾಳಗಾರ ನಾಗರಸಾಲೆ ಮೂಲೆ ಬೆಟ್ಟದ ಮೂಲಕ ಮುಂದೆ ಕರೂರು ಮಾರ್ಗವಾಗಿ ತಟ್ಟಗುಣಿ ಹೊಳೆಗೆ ತಲುಪುವ ಒಂದು ಹುಲಿ-ಚಿರತೆ ಕಾರಿಡಾರೇ ಇದೆ. ಬೆಟ್ಟ, ಬೇಣದಗುಂಟ ಚಿರತೆ ರಾತ್ರಿ ಸಮಯದಲ್ಲಿ  ಸಂಚರಿಸುತ್ತಿವೆ. -6-7 ವರ್ಷಗಳ ಹಿಂದೆ ತಮ್ಮ ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಮಧ್ಯರಾತ್ರಿಯಲ್ಲಿ ಚಿರತೆಯೊಂದು ಕಚ್ಚಿಕೊಂಡು ಮನೆಯ ಹಿಂದಿನ  ಬೆಟ್ಟದ ತುದಿಗೆ ಹೋಗಿತ್ತು. ನಾಯಿ ಸೆಣೆಸಾಡಿ ಅದ್ಹೇಗೋ ಅದೃಷ್ಟವಶಾತ್ ತಪ್ಪಿಸಿಕೊಂಡು ವಾಪಸ್ ಬಂದಿತ್ತು. ನಂತರ ಎರಡು ವರ್ಷ ಬದುಕಿತ್ತು.

ಇದರಂತೆ ಕೆಳಗಿನ ಬಾಳಗಾರದ ಎಂ.ಜಿ.ಶಾಸ್ತ್ರೀ ಅವರ ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು  ಮೂರು ವರ್ಷಗಳ ಹಿಂದೆ ಚಿರತೆಯೊಂದು  ಕಚ್ಚಿಕೊಂಡು ಹೋಗಿತ್ತು. ಅನೇಕ ಬಾರಿ ಇವುಗಳ  ಘರ್ಜನೆಯನ್ನು ತಾವು ಕೇಳಿದ್ದಾಗಿ ಬಾಳಗಾರ ಜೋಗಿಮನೆಯ ಅನಂತ ರಾಮಕೃಷ್ಣ ಹೆಗಡೆ ಆತಂಕ ವ್ಯಕ್ತಪಡಿಸಿದ್ದಾರೆ.

ಬಾಳಗಾರ ಶಾಲೆಯ ಎದುರು ಕಂಡು ಬಂದ ಚಿರತೆ ಲದ್ದಿ ಕುತೂಹಲವನ್ನುಂಟು ಮಾಡಿದೆ. ಸ್ವಲ್ಪ ದಿನಗಳ ಹಿಂದೆ ಇದರ ಸಮೀಪವೇ ಅನತಿ ದೂರದಲ್ಲಿ ಇದೇ ತರಹದ ಲದ್ದಿ ಕಂಡಿತ್ತು. ಅಂದರೆ ಈ  ಭಾಗದಲ್ಲಿ ಎರಡು ಚಿರತೆಗಳು ಓಡಾಡುತ್ತಿವೆ. ಇಲಾಖೆಯವರು ಸ್ಥಳ ಪರಿಶೀಲಿಸಿ ಚಿರತೆ ಮತ್ತು ಹುಲಿ‌ ಸಂಚಾರದ ಕುರಿತು  ಜನರಿಗೆ ಸ್ಪಷ್ಟ  ಮಾಹಿತಿ ಹಾಗೂ ಅಭಯ ಕೊಡಬೇಕು. ಇದೊಂದು ಹುಲಿ-ಚಿರತೆಯ ಕಾರಿಡಾರ್ ಆಗಿರಲಿಕ್ಕೂ ಸಾಕು. –ಡಾ.ಬಾಲಕೃಷ್ಣ ಹೆಗಡೆ, ಇತಿಹಾಸ ತಜ್ಞ

ಈ ಭಾಗದಲ್ಲಿ ಚಿರತೆ ಓಡಾಟ ಇದೆ. ಚಿರತೆಯದ್ದೇ‌ ಲದ್ದಿ ಆಗಿರಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. –ಡಾ.ಅಜ್ಜಯ್ಯ ಡಿಎಫ್ ಓ

Advertisement

Udayavani is now on Telegram. Click here to join our channel and stay updated with the latest news.

Next