Advertisement

ಅಳದಂಗಡಿ: ಕುದ್ಯಾಡಿ ಗ್ರಾಮದಲ್ಲಿ ಚಿರತೆ ಹಾವಳಿ

09:44 PM Mar 09, 2020 | Sriram |

ವಿಶೇಷ ವರದಿ-ಬೆಳ್ತಂಗಡಿ: ಇಲ್ಲಿನ ಅಳದಂಗಡಿ ಸಮೀಪದ ಕುದ್ಯಾಡಿ ಗ್ರಾಮದಲ್ಲಿ ಮೂರು ವರ್ಷಗಳಿಂದ ಚಿರತೆ ಸುತ್ತಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ ಈ ಪರಿಸರದ ಮಹಿಳೆಯೋರ್ವರು ಎರಡು ಬಾರಿ ಚಿರತೆಯನ್ನು ಪ್ರತ್ಯಕ್ಷ ಕಂಡ ಬಳಿಕ ಗ್ರಾಮಸ್ಥರು ಭಯಭೀತರಾಗಿದ್ದಾರೆ.

Advertisement

ಹಲೆಕ್ಕಿ ಪರಿಸರದ ಅರಣ್ಯ ಪ್ರದೇಶದಲ್ಲಿ ಚಿರತೆ ವಾಸಿಸುತ್ತಿದ್ದು, ಡಿಸೆಂಬರ್‌ ತಿಂಗಳಲ್ಲಿ ರಾತ್ರಿ ವೇಳೆ ರಸ್ತೆ ಬದಿ ಚಿರತೆ ಮಲಗಿದ್ದುದನ್ನು ಸ್ಥಳೀಯರು ಗಮನಿಸಿದ್ದರು. ಕಾಡಂಚಿನಲ್ಲಿ ವಾಸವಾಗಿರುವ ಇಲ್ಲಿಯ ಮನೆಯೊಂದರ ಮಹಿಳೆಯೋರ್ವರು ಕೆಲವು ದಿನಗಳ ಹಿಂದೆ ಮರದಲ್ಲಿ ಚಿರತೆಯನ್ನು ಕಂಡಿರುವುದಾಗಿ ತಿಳಿಸಿದ್ದಾರೆ. ಕಾಡಿನಲ್ಲಿ ಚಿರತೆ ಕೂಗುವುದೂ ಕೇಳಿಸಿದೆ ಎಂದು ಭಯದಿಂದಲೇ ಸ್ಥಳೀಯರ ಗಮನಕ್ಕೆ ತಂದಿದ್ದರು. ಸಂಜೆ ಕೂಲಿ ಕೆಲಸ ಮುಗಿಸಿ ಮನೆಗೆ ತೆರಳುವ ಮಹಿಳೆಯರು, ಶಾಲಾ ಮಕ್ಕಳು ಆತಂಕಗೊಂಡಿದ್ದಾರೆ.

ಬಾವಿಗೆ ಬಿದ್ದಿತ್ತು
ಸ್ಥಳೀಯರು ಹೇಳುವಂತೆ ಸುಮಾರು ಐದು ವರ್ಷಗಳ ಹಿಂದೆ ಇದೇ ಗ್ರಾಮದ ನೊಚ್ಚನಾಡಿ ಎಂಬಲ್ಲಿ ಮನೆಯೊಂದರ ಬಾವಿಗೆ ಚಿರತೆ ಮರಿಯೊಂದು ಬಿದ್ದಿತ್ತು. ಅರಣ್ಯ ಇಲಾಖೆ ಸಿಬಂದಿ ಅದನ್ನು ರಕ್ಷಿಸಿದ್ದರು. ಅದು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು, ಅದೇ ಚಿರತೆ ಈಗ ಬೆಳೆದು ಗ್ರಾಮದಲ್ಲಿ ಸುತ್ತಾಡುತ್ತಿದೆ ಎನ್ನಲಾಗಿದೆ. ಹಲವು ಬಾರಿ ನಾಯಿ – ಕೋಳಿಗಳನ್ನು ಹೊತ್ತೂಯ್ದಿತ್ತು. ಕಾಡಿನಲ್ಲಿರುವ ಮಂಗಳನ್ನು ಹಿಡಿದು ತಿನ್ನುವ ಕುರಿತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೃಷಿಕರಾಗಿರುವ ಸ್ಥಳೀಯರು ಭೀತರಾಗಿದ್ದು, ಕಾಡಿನಿಂದ ಕಟ್ಟಿಗೆ, ತರಗೆಲೆ ತರಲು ಹಿಂದೇಟು ಹಾಕುತ್ತಿದ್ದಾರೆ.

ಚಿರತೆ ಹೆಜ್ಜೆ?
ಕುದ್ಯಾಡಿ- ಅಂಡಿಂಜೆ- ವೇಣೂರು ಸಂಪರ್ಕಿಸುವ ಕಚ್ಚಾ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಡಾಮರು ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಹಲೆಕ್ಕಿ ಬಳಿ ರಸ್ತೆಗೆ ಮೋರಿ ನಿರ್ಮಿಸಲಾಗಿದ್ದು, ಚಿರತೆಯು ಕ್ಯೂರಿಂಗ್‌ಗೆ ಕಟ್ಟಿರುವ ನೀರನ್ನು ಕುಡಿಯಲು ಬಂದಿರಬಹುದೆಂದು ಶಂಕಿಸಲಾಗಿದ್ದು, ಕೆಸರಿನಲ್ಲಿ ಸುಮಾರು 100 ಮೀ. ದೂರದ ವರೆಗೆ ಹೆಜ್ಜೆ ಗುರುತುಗಳು ಕಂಡಿವೆ.

 ಆಗಾಗ ಕಾಣಿಸುತ್ತಿದೆ
ಗ್ರಾಮದ ಕಾಡು ಪ್ರದೇಶಗಳಲ್ಲಿ ವಿವಿಧೆಡೆ ಈ ಚಿರತೆ ಸಂಚರಿಸುತ್ತಿದ್ದು, ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತಿದೆ. ಕಾಡಿನಲ್ಲಿ ಕಾಡುಕೋಳಿ, ಹಂದಿ ಇತ್ಯಾದಿ ಪ್ರಾಣಿಗಳು ಇರುವುದರಿಂದ ಚಿರತೆಗೆ ಆಹಾರ ಲಭ್ಯವಾಗುತ್ತಿದೆ. ದೂರ ದೂರ ಮನೆಗಳು ಇರುವುದರಿಂದ ಸೂಕ್ತ ಕ್ರಮ ಅಗತ್ಯ.
– ಪ್ರಮೋದ್‌, ಸ್ಥಳೀಯರು

Advertisement

ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಅಂಡಿಂಜೆ ಪಕ್ಕ ಬೋನು ಇರಿಸಿದ್ದೇವೆ. ಸಾವ್ಯ, ಕೊಕ್ರಾಡಿ ಆಸುಪಾಸು ಚಿರತೆ ಕಾಣಸಿಕ್ಕಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಚಿರತೆ ಆಹಾರಕ್ಕಾಗಿ ಅಲೆಯುವುದರಿಂದ ನಿರ್ದಿಷ್ಟವಾಗಿ ಬೋನು ಇರಿಸಲು ಸಾಧ್ಯವಿಲ್ಲ. ಹಲೆಕ್ಕಿಯಲ್ಲಿ ಬೋನು ಇರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.
-ಅಜಿತ್‌, ಉಪ ವಲಯ ಅರಣ್ಯಧಿಕಾರಿ, ವೇಣೂರು ವಲಯ

 ಚಿರತೆ ನೋಡಿದ್ದೇನೆ
ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಮರದ ಮೇಲೆ ಚಿರತೆ ಕುಳಿತುಕೊಂಡಿರುವುದನ್ನು ಇತ್ತೀಚಿನ ಕೆಲವು ದಿನಗಳಲ್ಲಿ ನಾನು ನೋಡಿದ್ದೇನೆ. ರಾತ್ರಿ ಚಿರತೆ ಕೂಗುವ ಶಬ್ದ ಕೇಳಿಸುತ್ತದೆ. ಒಂದು ಕಿ.ಮೀ. ದೂರ ಕಾಡಿನ ಮಧ್ಯೆ ನೀರು ತರಲು ಹಾಗೂ ಕೆಲಸಕ್ಕೆ ತೆರಳುವುದರಿಂದ ದಾಳಿ ಮಾಡಬಹುದೆಂದು ಆತಂಕವಾಗುತ್ತದೆ.
– ರಾಧಾ, ಚಿರತೆ ನೋಡಿರುವ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next