ಹುಣಸೂರು: ಹುಣಸೂರು ನಗರಕ್ಕೆ ಸಮೀಪದ ಕಿರಿಜಾಜಿ ಫಾರಂ ಸುತ್ತಮುತ್ತಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾಲ್ಕು ವರ್ಷದ ಗಂಡು ಚಿರತೆಯನ್ನು ಬೋನಿನಲ್ಲಿ ಬಂಧಿಯಾಗಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದೆ.
ಕಿರಿಜಾಜಿಯ ಜಾಫರ್ ಬೇಗ್‌ರಿಗೆ ಸೇರಿದ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿಟ್ಟಿದ್ದ ನಾಯಿಯನ್ನು ತಿನ್ನುಲು ಬಂದಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಜಾಫರ್‌ಬೇಗ್‌ರ ತೋಟದಲ್ಲಿ ಹಲವಾರು ಚಿರತೆ ಕಾಣಿಸಿಕೊಂಡ ಬಗ್ಗೆ ಕಾರ್ಮಿಕರು ಮಾಹಿತಿ ನೀಡಿದ್ದರ ಮೇರೆಗೆ ತೋಟದ ಮಾಲಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅಲ್ಲದೆ ಈ ಭಾಗದ ಹಲವಾರು ನಾಯಿಗಳನ್ನು ತಿಂದು ಹಾಕಿತ್ತು. ತೋಟದ ಮಾಲಿಕರ ದೂರಿನ ಮೇರೆಗೆ ಕಳೆದ ೧೫ ದಿನಗಳ ಹಿಂದೆ ಬೋನ್ ಇಡಲಾಗಿತ್ತು. ಬುಧವಾರ ಬೆಳಗ್ಗೆ ನಾಯಿ ತಿನ್ನಲು ಬಂದಿದ್ದ ಚಿರತೆಯು ತಾನೇ ಸಿಲುಕಿಕೊಂಡಿದ್ದು, ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಆರ್.ಎಫ್.ಓ. ನಂದಕುಮಾರ್, ಡಿ.ಆರ್.ಎಫ್.ಓ.ಹರೀಶ್ ಹಾಗೂ ಸಿಬ್ಬಂದಿ ಭೇಟಿ ಇತ್ತಿದ್ದರು.
ಸೆರೆ ಸಿಕ್ಕ ಚಿರತೆ ಆನೆಚೌಕೂರಲ್ಲಿ ಬಂಧಮುಕ್ತ:
ಸೆರೆ ಸಿಕ್ಕಿರುವ ನಾಲ್ಕು ವರ್ಷದ ಗಂಡು ಚಿರತೆಯನ್ನು ನಾಗರಹೊಳೆ ಉದ್ಯಾನದ ಆನೆಚೌಕೂರು ವಲಯದಲ್ಲಿ ಬಂಧ ಮುಕ್ತಗೊಳಿಸಲಾಗಿದೆ ಎಂದು ಆರ್.ಎಫ್.ಓ.ನಂದಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.