Advertisement

ಹಂದಿ ಬೇಟೆಗೆ ಇಟ್ಟ ಉರುಳಿಗೆ ಸಿಲುಕಿ ಚಿರತೆ ಸಾವು

06:40 PM Aug 09, 2020 | sudhir |

ಪಿರಿಯಾಪಟ್ಟಣ: ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿಯ ತಿತಿಮತಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಂದಿ ಬೇಟೆಗೆಂದು ಇಟ್ಟಿದ್ದ ಉರುಳಿಗೆ ಗಂಡು ಚಿರತೆಯೊಂದು ಸಿಲುಕಿಕೊಂಡು ಹೊರ ಬರಲಾರದೆ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

Advertisement

ವಿಷಯ ತಿಳಿದು ಸ್ಥಳಕ್ಕೆ ಡಿಸಿಎಫ್ ಮಹೇಶ್ ಕುಮಾರ್, ಎಸಿಎಫ್ ಸತೀಶ್, ವೈದ್ಯಾಧಿಕಾರಿ ಡಾ.ಮುಜೀಬ್, ವನ್ಯಜೀವಿ ಸಂರಕ್ಷಣಾಧಿಕಾರಿ ಕೃತಿಕಾ, ಎನ್.ಟಿ.ಸಿ ನಿರ್ದೇಶಕ ವೆಂಕಟನಾಯ್ಡು ಆಗಮಿಸಿ ಪರಿಶೀಲಿಸಿದರು.

ಈ ಕುರಿತು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಮುಜೀಬ್ ಮಾತನಾಡಿ ಮೃತ ಗಂಡು ಚಿರತೆಗೆ ಸುಮಾರು 6 ವರ್ಷದ್ದಾಗಿದ್ದು, ಕೇಬಲ್ ತಂತಿಯ ಉರುಳು ತಲೆಯಲ್ಲಿ ಸಿಲುಕಿ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಅದು ಹೊಟ್ಟೆಯ ಭಾಗಕ್ಕೆ ಬಿಗಿದುಕೊಂಡು ಮೃತಪಟ್ಟಿದೆ’ ಎಂದು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಆರ್‌ಎಫ್‌ಒ ಹನುಮಂತರಾಜು, ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಚಿರತೆಯ ಅಂತ್ಯಕ್ರಿಯೆ ನೆರವೇರಿಸಿದರು. ಕಳೆದ ವರ್ಷ ಪಿರಿಯಾಪಟ್ಟಣ ತಾಲೂಕಿನ ಮುಮ್ಮಡಿ ಕಾವಲು ಅರಣ್ಯ ಪ್ರದೇಶದಲ್ಲಿ ಇದೇ ರೀತಿ ಬೇಟೆಗಾರರು ಇಟ್ಟ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿತ್ತು.

ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Advertisement

ಗ್ರಾ.ಪಂ. ಪಿಡಿಒ ವಿರುದ್ಧ ಸಾರ್ವಜನಿಕರ ಆಕ್ರೋಶ:
ಕಾಡಂಚಿನ ಗ್ರಾಮ ಪಂಚಾಯಿತಿಗಳಾದ ಮಾಲಂಗಿ ಹಾಗೂ ಪಂಚವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೋಳಿ ಮತ್ತು ಮಾಂಸದ ಅಂಗಡಿಯ ಮಾಲೀಕರು ಕೋಳಿ ಮತ್ತು ಮಾಂಸದ ತ್ಯಾಜ್ಯವನ್ನು ಅರಣ್ಯ ಪ್ರದೇಶದಲ್ಲಿ ತಂದು ಸುರಿಯುತ್ತಿದ್ದು, ಇದರ ದುರ್ವಾಸನೆಗೆ ಅದನ್ನು ತಿನ್ನಲು ಬರುವ ಪ್ರಾಣಿಗಳು ರಸ್ತೆ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದರೆ ಮತ್ತೊಂದೆಡೆ ತ್ಯಾಜ್ಯದ ದುರ್ವಾಸನೆಗೆ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮುಗು ಮುಚ್ಚಿ ಓಡಾಡುವ ಪರಿಸ್ಥಿತಿ ಎದುರಾಗಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೋಳಿ ಮತ್ತು ಮಾಂಸ ಮಾರಾಟಗಾರರಿಂದ ಹಣದ ಆಮಿಷಕ್ಕೆ ಒಳಗಾಗಿ ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸದೆ ಸಬಾಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next