ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ನಾಗರದಿನ್ನಿ ಪರಿಸರದಲ್ಲಿ ಚಿರತೆ ಮರಿಗಳು ಪತ್ತೆಯಾಗಿದೆ. ಗ್ರಾಮದಲ್ಲಿ ರೈತರು ಅಳವಡಿಸಿರುವ ಸಿಸಿ ಕೆಮೆರಾದಲ್ಲಿ ಚಿರತೆಗಳ ಚಲನವಲನ ಪತ್ತೆಯಾಗಿದೆ.
ನಾಗರದಿನ್ನಿ ಗ್ರಾಮದ ಸುರೇಶ ಕುಬಕಡ್ಡಿ ಎಂಬ ರೈತರು ಮಹದೇವ ಕೋಲಕಾರ ಎಂಬ ರೈತರ ಜಮೀನಿನಲ್ಲಿ ಚಿರತೆ ಹಾಗೂ ಚಿರತೆ ಮರಿಗಳು ಇರುವುದನ್ನು ನೋಡಿದ್ದರು.
ಚಿರತೆಯನ್ನು ಕಂಡಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ ಅಲ್ಲದೆ ಅವುಗಳ ಚಲನವಲನ ಪತ್ತೆ ಹಚ್ಚಲು ರೈತರೇ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದರು ಈ ವೇಳೆ ಎರಡು ಚಿರತೆ ಮರಿಗಳು ಇರುವುದು ಪತ್ತೆಯಾಗಿದೆ.
ಇತ್ತ ಸಿಸಿ ಕ್ಯಾಮೆರಾದಲ್ಲಿ ಚಿರತೆ ಮರಿಗಳು ಗೋಚರಕ್ಕೆ ಬರುತ್ತಿದ್ದಂತೆ ಗ್ರಾಮದ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಕೃಷಿ ಕೆಲಸಕ್ಕೆ ಜಮೀನಿಗೆ ಹೋಗಲು ಭಯಪಡುವ ಸ್ಥಿತಿ ಎದುರಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೊಲ್ಹಾರ ತಹಶಿಲ್ದಾರ, ಎಸ್.ಎಸ್. ನಾಯಕಲಮಠ, ಅರಣ್ಯ ಅಧಿಕಾರಿ ಬಸವರಾಜ ಕೊಣ್ಣೂರ, ಜನರು ಸುರಕ್ಷಿತವಾಗಿ ಓಡಾಡುವಂತೆ ಹಾಗೂ ಒಬ್ಬೊಬ್ಬರೇ ಓಡಾಡುವ ಬದಲು ಒಬ್ಬರಿಗಿಂತ ಹೆಚ್ಚು ಜನರು ಕೂಡಿ ಓಡಾಡುವಂತೆ ಸಲಹೆ ನೀಡಿದ್ದಾರೆ.
ಇನ್ನು ಘಟನೆ ಕುರಿತು ಮಾಹಿತಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Mudigere: ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು… ಪತಿ, ಅತ್ತೆ, ಮಾವ ವಶಕ್ಕೆ