Advertisement

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

09:17 PM Dec 02, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮೇಘನಾ ಎಂಬ ವಿದ್ಯಾರ್ಥಿನಿ ಚಿರತೆಗೆ ಬಲಿಯಾಗಿರುವ ಘಟನೆ ನನ್ನ ಮನ ಕಲಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

“ಚಿರತೆಗಳಿಂದ# ಜನರ# ಜೀವ #ರಕ್ಷಿಸಿ’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಕೆಲ ದಿನಗಳ ಹಿಂದೆ ಮತ್ತೊಬ್ಬ ವಿದ್ಯಾರ್ಥಿ ಚಿರತೆ ದಾಳಿಯಿಂದ ಜೀವ ಕಳೆದುಕೊಂಡಿದ್ದ. ಅರಣ್ಯ ಇಲಾಖೆ ಕಾರ್ಯಕ್ಷಮತೆ ಕ್ಷೀಣಿಸಿದ ಕಾರಣಕ್ಕೆ ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.

ಹಾಗೆಯೇ, ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದರು ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೆ. ನಂದಿಬೆಟ್ಟದ ಆಸುಪಾಸಿನಲ್ಲಿ ಕೂಡ ಚಿರತೆಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ಜನ ಸಂಚಾರವೇ ಕಷ್ಟವಾಗಿದೆ. ಚಿರತೆಗಳ ಇರುವಿಕೆಯನ್ನು ಪತ್ತೆ ಹಚ್ಚಿ ಜನರನ್ನು ಎಚ್ಚರಗೊಳಿಸುವುದು ಅರಣ್ಯ ಇಲಾಖೆಯ ಹೊಣೆ. ಆ ಚಿರತೆಗಳನ್ನು ಹಿಡಿದು ದಟ್ಟ ಕಾಡಿಗೆ ಬಿಡಬೇಕಾದ ಅಗತ್ಯವಿದೆ. ಆದರೆ, ಅರಣ್ಯ ಇಲಾಖೆ ಗಾಢ ನಿದ್ರೆಯಲ್ಲಿ ಇದ್ದಂತೆ ಇದೆ. ಹಾಗಾದರೆ, ಇನ್ನೆಷ್ಟು ಜೀವಗಳು ಹೋಗಬೇಕು? ಎಂದು ಪ್ರಶ್ನಿಸಿದ್ದಾರೆ.

ಚಿರತೆ ದಾಳಿಗೆ ಮೃತಪಟ್ಟ
ಯುವತಿ ಕುಟುಂಬಕ್ಕೆ ಪರಿಹಾರ
ತಿ. ನರಸೀಪುರ: ಚಿರತೆ ದಾಳಿಯಿಂದ ಮೃತ‌ಪಟ್ಟ ಯುವತಿಯ ಕುಟುಂಬಕ್ಕೆ 7.5 ಲಕ್ಷ ರೂ.ಪರಿಹಾರ ಘೋಷಿಸಿ ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ಡಿಸಿಎಫ್ ಕಮಲ ಕಾರಿಕಾಳನ್‌ ವಿತರಿಸಿದರು.

ಗ್ರಾಮಸ್ಥರ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಚೆಕ್‌ ವಿತರಿಸಿ ಮಾತನಾಡಿದ ಅವರು, ಪ್ರತಿ ತಿಂಗಳು ಯುವತಿಯ ಕುಟುಂಬಕ್ಕೆ 2 ಸಾವಿರ ರೂ. ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಹೊರಗುತ್ತಿಗೆ ನೌಕರಿ ನೀಡುವ ಭರವಸೆ ನೀಡಿದರು.

Advertisement

ಕಂಡಲ್ಲಿ ಗುಂಡು: ಸುಮಾರು 15 ತಂಡಗಳನ್ನು ರಚಿಸಿ, ಚಿರತೆಯನ್ನು ಕಂಡಲ್ಲಿ ಗುಂಡಿಕ್ಕುವ ಕಾರ್ಯಾಚರಣೆಗೆ ಅನುಮತಿ ದೊರಕಿದೆ. ನಾಳೆಯಿಂದಲೇ ಕಾರ್ಯಾಚರಣೆ ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next