ಕನಕಪುರ: ಚಿರತೆಯೊಂದು ವ್ಯಕ್ತಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಕನಕಪುರ ತಾಲೂಕಿನ ಗಡಿ ಭಾಗದ ಬೇಲಿಕೊತ್ತನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ತಮ್ಮಯ್ಯ (65) ಗಾಯಗೊಂಡ ವ್ಯಕ್ತಿ. ಶುಕ್ರವಾರ ರಾತ್ರಿ 10.30ರ ಸಮಯದಲ್ಲಿ, ಮೂತ್ರ ವಿಸರ್ಜನೆಗೆಂದು ತಮ್ಮಯ್ಯ ಮನೆ ಹಿಂಭಾಗ ಹೋದಾಗ ಪೊದೆಯಲ್ಲಿ ಚಿರತೆ ಅವಿತು ಕುಳಿತಿತ್ತು.
ಆದರೆ ಅದು ನಾಯಿ ಎಂದು ಭಾವಿಸಿದ ತಮ್ಮಯ್ಯ, ಜೋರಾಗಿ ಗದರಿದಾಗ ಚಿರತೆ ಆತನ ಮೇಲೆರಗಿ ತಲೆಗೆ ಬಾಯಿ ಹಾಕಿದೆ. ಈ ವೇಳೆ ನೆಲಕ್ಕೆ ಬಿದ್ದ ತಮ್ಮಯ್ಯ, ಕೈಗೆ ಸಿಕ್ಕ ಮರದ ತುಂಡಿನಿಂದ ಚಿರತೆಗೆ ಹೊಡೆದಿದ್ದಾರೆ. ಪೆಟ್ಟು ತಿಂದ ಚಿರತೆ ಹಿಂದೆ ಸರಿದಿದೆ.
ನಂತರ ಸಮೀಪದಲ್ಲೇ ಇರುವ ರೇಷ್ಮೆ ಹುಳುವಿನ ಮನೆಗೆ ತಮ್ಮಯ್ಯ ಓಡಿ ಹೋಗಿದ್ದು, ಆತನನ್ನು ಹಿಂಬಾಲಿಸಿದ ಚಿರತೆ ಕೂಡ ರೇಷ್ಮೆ ಮನೆ ಸೇರಿಕೊಂಡಿದೆ. ಇದರಿಂದ ಆತಂಕಕ್ಕೊಳಗಾದ ತಮ್ಮಯ್ಯ ಜೋರಾಗಿ ಕೂಗಿಕೊಂಡಿದ್ದು, ಅಕ್ಕಪಕ್ಕದ ಮನೆಯವರು ಬಂದು ಆತನನ್ನು ರಕ್ಷಿಸಿ, ಚಿರತೆಯನ್ನು ರೇಷ್ಮೆ ಮನೆ ಒಳಗೆ ಕೂಡಿ ಬೀಗ ಹಾಕಿದ್ದಾರೆ.
ಕೂಡಲೇ ಗಾಯಾಳುವನ್ನು ಗ್ರಾಮಸ್ಥರೇ ಕನಕಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ತಮ್ಮಯ್ಯ ಅಪಾಯದಿಂದ ಪಾರಾಗಿದ್ದಾರೆ. ತಹಸೀಲ್ದಾರ್ ಶ್ರೀನಿವಾಸ್‌ಪ್ರಸಾದ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ತಮ್ಮಯ್ಯನ ಆರೋಗ್ಯ ವಿಚಾರಿಸಿ ಸರಕಾರದಿಂದ ಲಭ್ಯವಿರುವ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಚಿರತೆ ಸೆರೆ: ವಿಷಯ ತಿಳಿದು ಶನಿವಾರ ಬೆಳಗ್ಗೆ ಚನ್ನಪಟ್ಟಣ ಅರಣ್ಯಾಧಿಕಾರಿಗಳು ಬೇಲಿಕೊತ್ತನೂರು ಗ್ರಾಮಕ್ಕೆ ಭೇಟಿ ನೀಡಿ, ರೇಷ್ಮೆ ಮನೆಯಲ್ಲಿದ್ದ ಚಿರತೆಗೆ ಅರಿವಳಿಕೆ ಮದ್ದು ನೀಡಿ, ಸೆರೆ ಹಿಡಿದರು. ಚಿರತೆ ದಾಳಿ ವಿಷಯ ತಿಳಿದು ಅಕ್ಕಪಕ್ಕದ ಗ್ರಾಮಗಳ ಜನ ಬಂದು ಬೇಲಿಕೊತ್ತನೂರಿಗೆ ಬಂದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.