Advertisement

Police: 382 ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಕೊಡಗಿನ ಲಿಯೋ ಇನ್ನಿಲ್ಲ

09:25 PM Dec 21, 2023 | Team Udayavani |

ಮಡಿಕೇರಿ: ಸುಮಾರು 382 ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನ ದಳ ವಿಭಾಗದ ಲಿಯೋ ಅನಾರೋಗ್ಯದಿಂದ ಮೃತಪಟ್ಟಿದೆ.
ಲಿಯೋ 2013 ನೇ ಫೆ.26 ರಿಂದ 10 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದೆ. ತನ್ನ ಸೇವಾ ಅವಧಿಯಲ್ಲಿ ವಿವಿಧ ಪೊಲೀಸ್ ಠಾಣೆಯಲ್ಲಿ ವರದಿಯಾದ ಕ್ಲಿಷ್ಟಕರ ಪ್ರಕರಣಗಳ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

Advertisement

382 ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಲಿಯೋ 46 ಅಪರಾದಿಗಳನ್ನು ಪತ್ತೆ ಮಾಡಿದೆ. 22 ಪ್ರಕರಣಗಳಲ್ಲಿ ಅಪರಾಧಿಗಳ ಸುಳಿವು ನೀಡಿದೆ. 2018 ನೇ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭೂಕಸಿತದಿಂದ ನಾಪತ್ತೆಯಾದ ನಾಲ್ವರ ಮೃತ ದೇಹಗಳನ್ನು ಪತ್ತೆ ಮಾಡಿದೆ. ಚೆಕ್ ಪೋಸ್ಟ್‌ಗಳಲ್ಲಿ ನಿಷೇಧಿತ ಮಾದಕ ವಸ್ತುಗಳ ಸಾಗಾಟ ಪ್ರಕರಣವನ್ನು ಬಯಲಿಗೆಳೆದಿದೆ.
ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 4 ಬಹುಮಾನವನ್ನು ಗೆದ್ದಿದೆ. ಲಿಯೋ ಕೊಡಗು ಪೊಲೀಸ್ ಘಟಕದಲ್ಲಿ ಒಟ್ಟು 10 ವರ್ಷ 9 ತಿಂಗಳ ಕಾಲ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ 2023 ನ.17 ರಂದು ರಂದು ಸೇವೆಯಿಂದ ನಿವೃತ್ತಿಯನ್ನು ಹೊಂದಿದೆ.

ಪೊಲೀಸ್ ಸಿಬ್ಬಂದಿಗಳಾದ ಮನಮೋಹನ.ಬಿ.ಪಿ ಹಾಗೂ ಶಿವ.ಎಂ.ಆರ್ ಅವರುಗಳು ಲಿಯೋನ ಹ್ಯಾಂಡ್ಲರ್‌ಗಳಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇಂದು ಮೃತ ಲಿಯೋಗೆ ಅಂತಿಮ ಗೌರವ ಸಲ್ಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ಲಿಯೋ ನೀಡಿದ ಅತ್ಯುತ್ತಮ ಸೇವೆಯನ್ನು ಸ್ಮರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next