ಗುಜರಾತ್: ಪೂರೈಕೆಯ ಕೊರತೆ ಮತ್ತು ಹೆಚ್ಚಿನ ಬೇಡಿಕೆಯ ಹಿನ್ನೆಲೆಯಲ್ಲಿ ಗುಜರಾತ್ ನ ರಾಜ್ ಕೋಟ್ ನಲ್ಲಿ ಒಂದು ಕೆಜಿ ಲಿಂಬೆ ಹಣ್ಣಿನ ಬೆಲೆ 200 ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಂಜಾಬ್ ಆಯ್ತು ಈಗ ಕೇಜ್ರಿವಾಲ್ ಚಿತ್ತ ಗುಜರಾತ್ ನತ್ತ…2 ದಿನ ಭೇಟಿ, ರೋಡ್ ಶೋ
ಈ ಮೊದಲು ಒಂದು ಕೆಜಿ ಲಿಂಬೆ ಹಣ್ಣು ಕೆಜಿಗೆ 50ರಿಂದ 60 ರೂಪಾಯಿಗೆ ಮಾರಾಟವಾಗುತ್ತಿತ್ತು, ಆದರೆ ಲಿಂಬೆ ಹಣ್ಣು ಪೂರೈಕೆಯಲ್ಲಿ ಕೊರತೆ ಉಂಟಾದ ಪರಿಣಾಮ ಒಂದು ಕೆಜಿ ಲಿಂಬೆ ಹಣ್ಣಿನ ಬೆಲೆ 200 ರೂಪಾಯಿಗೆ ಹೆಚ್ಚಳವಾಗಿದೆ ಎಂದು ವರದಿ ವಿವರಿಸಿದೆ.
ನಾವು ನಮ್ಮ ಪರಿಮಿತಿಯ ಆದಾಯದೊಳಗ ಬದುಕುತ್ತಿರುತ್ತೇವೆ. ಆದರೆ ಬೆಲೆ ಹೆಚ್ಚಳವಾದಾಗ ನಮ್ಮ ಅಡುಗೆ ಮನೆ, ಮಾರಾಟದ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ಈ ಬೆಲೆ ಯಾವಾಗ ಇಳಿಕೆಯಾಗಲಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಗ್ರಾಹಕರೊಬ್ಬರು ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ವಾತಾವರಣದಲ್ಲಿ ತಾಪಮಾನ ಹೆಚ್ಚಾದಂತೆ ಜನರು ಹೆಚ್ಚಾಗಿ ಲಿಂಬೆ ಹಣ್ಣನ್ನು ಬಳಸುತ್ತಾರೆ. ಏಕೆಂದರೆ ಅದರಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ನಿರ್ಜಲೀಕರಣವನ್ನು ತಡೆಯುತ್ತದೆ ಅಲ್ಲದೇ ಜೀರ್ಣಕ್ರಿಯೆಗೆ ಹೆಚ್ಚಿನ ಅನುಕೂಲವಾಗಲಿದೆ.
ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಆದರೆ ಇದು ನಮ್ಮ ಊಹೆಯನ್ನು ಮೀರಿ ಬೆಲೆ ಅಧಿಕವಾಗಿದೆ. ಇದರಿಂದಾಗಿ ಮಧ್ಯಮ ವರ್ಗದ ಗ್ರಾಹಕರಿಗೆ ಇಷ್ಟೊಂದು ದುಬಾರಿ ತರಕಾರಿ ಖರೀದಿಸುವುದು ಕಷ್ಟವಾಗಲಿದೆ. ಲಿಂಬೆ ಹಣ್ಣಿನ ಬೆಲೆ ಹೆಚ್ಚಳದಿಂದ ನಮಗೆ ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಖರೀದಿದಾರ ಹಿಮಾಂಶು ತಿಳಿಸಿರುವುದಾಗಿ ವರದಿ ತಿಳಿಸಿದೆ.