Advertisement

ಲೆಹರ್‌ಸಿಂಗ್‌ ಸಹಿಯೇ ನಕಲಿ: ಬಿಜೆಪಿ

10:24 AM Feb 26, 2017 | |

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಲೆಹರ್‌ಸಿಂಗ್‌ ಅವರಿಗೆ ಸೇರಿದೆ ಎನ್ನಲಾದ ಡೈರಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್‌ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್‌ ಬಿಡುಗಡೆ ಮಾಡಿದ ದಾಖಲೆಯಲ್ಲಿರುವ ಲೆಹರ್‌ ಸಿಂಗ್‌ ಅವರ ಸಹಿಯೇ ನಕಲಿ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

Advertisement

ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ, ಲೆಹರ್‌ಸಿಂಗ್‌ ಅವರು ಸಹಿ ಮಾಡುವಾಗ ಆರಂಭದಲ್ಲಿ ಎಂದು ಬರೆಯುತ್ತಾರೆ. ಆದರೆ, ಕಾಂಗ್ರೆಸ್‌ನ ದಾಖಲೆಗಳಲ್ಲಿ ಔಚ ಎಂದಿದೆ. ಮೇಲಾಗಿ ಅವರಿಗೆ ಡೇರಿ ಬರೆಯುವ ಅಭ್ಯಾಸವೇ ಇಲ್ಲ. ಈ ಎಲ್ಲಾ ಅಂಶಗಳ ಕುರಿತು ಲೆಹರ್‌ ಸಿಂಗ್‌ ಅವರೇ ಸ್ಪಷ್ಟನೆ ನೀಡುವುದರ ಜತೆಗೆ ನಕಲಿ ದಾಖಲೆಗಳ ಕುರಿತು ದೂರನ್ನೂ ನೀಡಲಿದ್ದಾರೆ ಎಂದರು.

ಕಾಂಗ್ರೆಸ್‌ನ ರಾಜ್ಯ ನಾಯಕರು ಹೈಕಮಾಂಡ್‌ಗೆ ಕಪ್ಪ ನೀಡಿರುವ ಕುರಿತು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅವರ ಡೈರಿ ಮಾಧ್ಯಮಗಳಲ್ಲಿ ಬಿಡುಗಡೆಯಾದ ಬಳಿಕ ಆಘಾತಕ್ಕೆ ಒಳಗಾಗಿರುವ ಕಾಂಗ್ರೆಸ್‌, ಲೆಹರ್‌ ಸಿಂಗ್‌ ಹೆಸರಿನಲ್ಲಿ ನಕಲಿ ಡೈರಿ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಿರುವ 2013ರಲ್ಲಿ ಲೆಹರ್‌ ಸಿಂಗ್‌ ಬರೆದಿದ್ದಾರೆ ಎನ್ನಲಾದ ಡೈರಿಯಲ್ಲಿ ನಮೋ ಎಂಬ ಹೆಸರು ದಾಖಲಾಗಿದ್ದು, ಇದು ನರೇಂದ್ರಮೋದಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ, ನಮೋ ಎಂಬ ಹೆಸರು ಬಂದಿದ್ದೇ 2014ರಲ್ಲಿ ಲೋಕಸಭೆ ಚುನಾವಣೆಯಾ ಬಳಿಕ. ಅಲ್ಲದೆ, 2013ರಲ್ಲಿ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ನಕಲಿ ಡೈರಿ ಬಿಡುಗಡೆ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದರು.

ಕಾಂಗ್ರೆಸ್‌ ಹೈಕಮಾಂಡ್‌ಗೆ ಕಪ್ಪ ಸಂದಾಯವಾಗಿರುವ ಕುರಿತು ಗೋವಿಂದರಾಜು ಅವರ ಡೈರಿಯಲ್ಲಿ ಬರೆಯಲಾಗಿದೆ ಎಂದು ಬಿಜೆಪಿ ಹೇಳಿದಾಗ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆ ಡೈರಿ ಮಾಧ್ಯಮಗಳ ಮೂಲಕ ಬಿಡುಗಡೆಯಾದ ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಆ ಡೈರಿ ಗೋವಿಂದರಾಜು ಅವರದ್ದೇ ಮತ್ತು ಅದರಲ್ಲಿರುವ ಮಾಹಿತಿ ಸತ್ಯ ಎಂಬುದು ಗೊತ್ತಾಗುತ್ತದೆ. ಈ ಪ್ರಕರಣವನ್ನು ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್‌ನವರು ಲೆಹರ್‌ ಸಿಂಗ್‌ ಹೆಸರಿನ ನಕಲಿ ಡೈರಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳಿಂದಾಗಿ ಬಿಜೆಪಿ ಪಕ್ಷದ ವಿಶ್ವಾಸರ್ಹತೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ನಕಲಿ ಪ್ರತಿ ಹರಿಯಬಿಟ್ಟಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಮನವಿ ಮಾಡಿದೆ.

Advertisement

ತನಿಖೆ ನಡೆಸುವಂತೆ ಸಿಬಿಐಗೆ ಪತ್ರ
ಈ ಮಧ್ಯೆ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಬೆಳಕಿಗೆ ಬಂದ ಹೈಕಮಾಂಡ್‌ಗೆ 1000 ಕೋಟಿ ರೂ. ಲಂಚ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಸಿಬಿಐಗೆ ಪತ್ರ ಬರೆದಿದ್ದಾರೆ.

ಗೋವಿಂದರಾಜು ಅವರ ಡೈರಿಯಲ್ಲಿ ಹೈಕಮಾಂಡ್‌ಗೆ ನೀಡಿರುವ ಹಣ, ಬಿಹಾರ ಚುನಾವಣೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳಿಗೆ ಹಣ ಸಂದಾಯ ಮಾಡಿರುವ ಬಗ್ಗೆ ಬರೆಯಲಾಗಿದೆ. ಹವಾಲಾ ಮೂಲಕ ಈ ಹಣ ರವಾನಿಸಿರುವ ಬಗ್ಗೆ ಅನುಮಾನವಿದೆ. ಆದ್ದರಿಂದ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಅವರು ಸಿಬಿಐ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಜನಜಾಗೃತಿಗೆ ಬಿಜೆಪಿ ನಿರ್ಧಾರ
ಕಾಂಗ್ರೆಸ್‌ ಹೈಕಮಾಂಡ್‌ಗೆ ಹಣ ನೀಡಿರುವ ಕುರಿತು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅವರ ಡೈರಿ ಬಹಿರಂಗ ಪ್ರಕರಣ ಮುಂದಿಟ್ಟುಕೊಂಡು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ಕುರಿತು ರಾಜ್ಯಾದ್ಯಂತ ಜನ ಜಾಗೃತಿ ಆಂದೋಲನ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಒಂದೆರಡು ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಿರಿಯ ನಾಯಕರು ಸಭೆ ಸೇರಿ ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ಮಾರ್ಚ್‌ ತಿಂಗಳಿನಿಂದಲೇ ಈ ಆಂದೋಲನ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಆರಂಭವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿದೆ. ಇತ್ತೀಚೆಗೆ ಸಚಿವ ರಮೇಶ್‌ ಜಾರಕಿಹೊಳಿ, ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ.ನಾಗರಾಜ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನೂರಾರು ಕೋಟಿ ರೂ. ಅಘೋಷಿತ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿಗಳ ಆಪ್ತರೆನ್ನಲಾದ ಅಧಿಕಾರಿಗಳಾದ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಅವರು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಈ ಎಲ್ಲಾ ಅಂಶಗಳನ್ನು ಜನರಿಗೆ ತಿಳಿಸುವ ಸಲುವಾಗಿ ಜನ ಜಾಗೃತಿ ಆಂದೋಲನ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಜಾಲತಾಣಗಳಲ್ಲಿ ನಕಲಿ ಡೈರಿ: ಬಿಜೆಪಿ ದೂರು
ಬೆಂಗಳೂರು:
ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಅವರ ಮನೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ಹೈಕಮಾಂಡ್‌ಗೆ ಹಣ ನೀಡಿದ್ದಾರೆ ಎಂದು ಆರೋಪಿಸುವ ನಕಲಿ ಡೈರಿಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಗರ ಪೊಲೀಸ್‌ ಆಯುಕ್ತರು ಮತ್ತು ಸೈಬರ್‌ ಪೊಲೀಸರಿಗೆ ಬಿಜೆಪಿ ದೂರು ನೀಡಿದೆ.

ಶುಕ್ರವಾರ ಮಧ್ಯಾಹ್ನದಿಂದ ಸಾಮಾಜಿಕ ಜಾಲತಾಣ “ಫೇಸ್‌ಬುಕ್‌’ ಮತ್ತು ವಾಟ್ಸ್‌ಆ್ಯಪ್‌ಗ್ಳಲ್ಲಿ ನಕಲಿ ಡೈರಿಯ ಪ್ರತಿ ಹರಿದಾಡುತ್ತಿದೆ. ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯರ ಮನೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಸಚಿವರು ಕಪ್ಪ ನೀಡಿದ್ದಾರೆ ಎನ್ನುವ ಡೈರಿ ದೊರೆತ ವಿಚಾರ ಬಹಿರಂಗವಾದ ಬಳಿಕ ಲೆಹರ್‌ ಸಿಂಗ್‌ ಮನೆಯಲ್ಲಿ ಡೈರಿ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ದುರುದ್ದೇಶಪೂರಿತವಾಗಿ ಈ ನಕಲಿ ದಾಖಲೆ ಹರಿಯಬಿಡಲಾಗಿದೆ. ಈ ರೀತಿಯಾದ ಸುದ್ದಿ ಕೆಲ ಸಂಜೆ ಪತ್ರಿಕೆಗಳಲ್ಲೂ ಪ್ರಕಟಗೊಂಡಿದ್ದು, ಅವುಗಳನ್ನೂ ದೂರಿನಲ್ಲಿ ಲಗತ್ತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next