Advertisement

ವಿಧಾನಸಭೆ ಕಲಾಪ ವರದಿ : ಖಾಸಗಿ ವಾಹಿನಿಗಳಿಗೆ ನಿರ್ಬಂಧ

01:26 PM Oct 11, 2019 | Sriram |

ಬೆಂಗಳೂರು: ವಿಧಾನಸಭೆ ಕಲಾಪಗಳನ್ನು ನೇರ ಪ್ರಸಾರ ಮಾಡಲು ಖಾಸಗಿ ವಾಹಿನಿಗ‌ಳಿಗೆ ನಿರ್ಬಂಧ ಹೇರಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸರಕಾರದ ಈ ತೀರ್ಮಾನವನ್ನು ವಿಪಕ್ಷಗಳು ಖಂಡಿಸಿದ್ದು, ಬಿಜೆಪಿಯ ನಿಜಬಣ್ಣ ಬಯಲಾಗಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.

Advertisement

ಗುರುವಾರದಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಖಾಸಗಿ ವಾಹಿನಿಗಳ ಕೆಮರಾಗಳಿಗೆ ನಿರ್ಬಂಧ ಹೇರಿ ದೂರದರ್ಶನದ ಮೂಲಕ ಖಾಸಗಿ ವಾಹಿನಿಗಳಿಗೆ ಔಟ್‌ಪುಟ್‌ ನೀಡಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೀರ್ಮಾನಿಸಿದ್ದು, ಅದರಂತೆ ಖಾಸಗಿ ವಾಹಿನಿಗಳ ಕೆಮರಾಮೆನ್‌ ಮತ್ತು ಪತ್ರಿಕೆಗಳ ಛಾಯಾಚಿತ್ರಗ್ರಾಹಕರಿಗೆ ವಿಧಾನಸಭೆ ಕಲಾಪ ಚಿತ್ರೀಕರಿಸಲು ಅಧಿಕೃತ ನಿರ್ಬಂಧ ಹೇರಲಾಗಿದ್ದು, ಖಾಸಗಿ ವಾಹಿನಿಗಳಿಗೆ ಲೋಕಸಭೆ ಮಾದರಿಯಲ್ಲಿ ದೂರದರ್ಶನದ ಮೂಲಕ ಔಟ್‌ ಪುಟ್‌ ನೀಡಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ವಾರ್ತಾ ಇಲಾಖೆಯಿಂದ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮೊದಲು ಸದಸ್ಯರು ಕುಳಿತುಕೊಳ್ಳುವ ಆಸನಗಳ ಹಿಂದಿನಿಂದಲೇ ಟಿವಿ ವಾಹಿನಿಗಳ ಕೆಮರಾಮ್ಯಾನ್‌ಗಳಿಗೆ ಚಿತ್ರೀಕರಣ ಮಾಡಲು ಅವಕಾಶ ಕೊಡಲಾಗಿತ್ತು. 2008 ರಲ್ಲಿಯೇ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಕೆಲವು ಶಾಸಕರು ಕೆಮರಾಮ್ಯಾನ್‌ಗಳಿಂದ ತಮಗೆ ಕಿರಿಕಿರಿಯಾಗುತ್ತದೆ ಎಂದು ಸ್ಪೀಕರ್‌ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಟಿವಿ ಕೆಮರಾಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಯಿತು.

ಆ ಸಂದರ್ಭದಲ್ಲಿಯೇ ಬಿಜೆಪಿ ಸರಕಾರದ ಅವಧಿಯಲ್ಲಿ ಸದನದಲ್ಲಿಯೇ ಮೂವರು ಸಚಿವರು ಬ್ಲೂé ಫಿಲ್‌ಂ ನೋಡಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆ ಸಂದರ್ಭದಲ್ಲಿಯೇ ವಿಧಾನಸಭೆ ಕಲಾಪಗಳ ಚಿತ್ರೀಕರಣಕ್ಕೆ ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯಲ್ಲಿ ಪ್ರತ್ಯೇಕ ಚಾನೆಲ್‌ ಮಾಡಬೇಕೆಂಬ ಪ್ರಸ್ತಾವ ಕೇಳಿ ಬಂದಿತ್ತು.
ಆನಂತರ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೋಷನ್‌ ಬೇಗ್‌ ವಾರ್ತಾ ಸಚಿವರಾಗಿದ್ದಾಗಲೂ ಲೋಕಸಭೆ ಮಾದರಿಯಲ್ಲಿ ವಿಧಾನಸಭೆಗೂ ಕಲಾಪ ಪ್ರಸಾರ ಮಾಡಲು ಪ್ರತ್ಯೇಕ ಚಾನೆಲ್‌ ಮಾಡುವ ಕುರಿತಂತೆ ಪ್ರಯತ್ನ ನಡೆಸಿದ್ದರು. ಆನಂತರ ಕೆ.ಬಿ.ಕೋಳಿವಾಡ್‌ ವಿಧಾನಸಭಾಧ್ಯಕ್ಷರಾಗಿದ್ದಲೂ ಮಾಧ್ಯಮಗಳಿಗೆ ನಿಬಂìಧ ಹೇರುವ ಕುರಿತು ಸದನದಲ್ಲಿ ಸುದೀರ್ಘ‌ ಚರ್ಚೆಯಾಗಿತ್ತು. ಅಲ್ಲದೇ ಮಾಧ್ಯಮ ನಿಯಂತ್ರಣ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾವವನ್ನು ಕೈ ಬಿಡಲಾಗಿತ್ತು.

ಮೈತ್ರಿ ಸರಕಾರದಲ್ಲಿಯೂ ಮಾಧ್ಯಮಗಳಿಗೆ ವಿಧಾನಸಭೆ ಪ್ರವೇಶವನ್ನೇ ನಿರಾಕರಿಸುವ ಪ್ರಯತ್ನವೂ ನಡೆಯಿತು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮಾಧ್ಯಮ ಪ್ರತಿನಿಧಿಗಳ ಕೊಠಡಿಯನ್ನು ತಳ ಮಹಡಿಗೆ ಸ್ಥಳಾಂತರ ಮಾಡಲು ಆದೇಶವನ್ನೂ ಹೊರಡಿಸಲಾಗಿತ್ತು. ಸಚಿವರ ಪತ್ರಿಕಾಗೋಷ್ಠಿಗಳನ್ನು ವಾರ್ತಾ ಭವನದಲ್ಲಿ ನಡೆಸಿ, ಮಾಧ್ಯಮ ಪ್ರತಿನಿಧಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಕಸರತ್ತು ನಡೆದಿತ್ತು. ಆ ಸಂದರ್ಭದಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ನಾಯಕರು ರಾಜ್ಯ ಸರಕಾರದ ನಡೆಯನ್ನು ಖಂಂಡಿಸಿ, ಪ್ರಜಾಪ್ರಭುತ್ವ ವಿರೋಧಿ ಸರಕಾರ ಎಂದು ವಾಗ್ಧಾಳಿ ನಡೆಸಿದ್ದರು.

Advertisement

ಈಗ ಅವರದೇ ಸರಕಾರದ ಅಧಿಕಾರದಲ್ಲಿ ದೃಶ್ಯ ಮಾಧ್ಯಮಗಳ ಕೆಮರಾಗಳನ್ನು ಕಲಾಪ ಚಿತ್ರೀಕರಣ ಮಾಡಲು ನಿಬಂìಂಧ ಹೇರುವ ಮೂಲಕ ಮಾಧ್ಯಮಗಳನ್ನು ದೂರ ಇಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗ ಕೇವಲ ಮೂರು ದಿನಗಳ ಅಧಿವೇಶನ ನಡೆಯುತ್ತಿರುವುದರಿಂದ ದೂರದರ್ಶನದ ಮೂಲಕ ಎಲ್ಲ ಮಾಧ್ಯಮಗಳಿಗೂ ಔಟ್‌ಪುಟ್‌ ಒದಗಿಸಲು ಚಿಂತನೆ ನಡೆಸಿದ್ದು. ಅದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಅದನ್ನೇ ಮುಂದುವರಿಸುವ ಆಲೋಚನೆಯನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೊಂದಿದ್ದಾರೆ ಎನ್ನಲಾಗಿದ್ದು, ಈ ಕುರಿತು ಟಿವಿ ಚಾನೆಲ್‌ ಸಂಪಾದಕರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯಲ್ಲಿ ಮಾಧ್ಯಮಗಳಿಗೆ ದೂರದರ್ಶನ ಮೂಲಕ ಔಟ್‌ಪುಟ್‌ ನೀಡಲಾಗುತ್ತದೆ. ಈ ಹಿಂದೆನೇ ಕೆಲವು ಸಭಾಧ್ಯಕ್ಷರು ಈ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಈಗ ಮೂರು ದಿನಗಳ ಅಧಿವೇಶನಕ್ಕೆ ಪ್ರಾಯೋಗಿಕವಾಗಿ ಮಾಡುತ್ತಿದ್ದೇವೆ. ಅದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹೇಗೆ ಮಾಡುವುದು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತೇವೆ.
-ವಿಶ್ವೇಶ್ವರ ಹೆಗೆಡೆ ಕಾಗೇರಿ, ವಿಧಾನಸಭಾಧ್ಯಕ್ಷ.

ಅಧಿವೇಶನಕ್ಕೆ ಮಾಧ್ಯಮಗಳ ನಿರ್ಬಂಧದ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಈ ಬಗ್ಗೆ ಸ್ಪೀಕರ್‌ ಜತೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಸ್ಪೀಕರ್‌ ಮತ್ತು ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
-ಆರ್‌.ಅಶೋಕ್‌, ಕಂದಾಯ ಸಚಿವ.

ನಮ್ಮ ಅವಧಿಯಲ್ಲಿ ಮಾಧ್ಯಮ ನಿರ್ಬಂಧ ಹೇರಿರಲಿಲ್ಲ. ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆವು. ಹಳೆಯ ಪ್ರಸ್ತಾವವಾಗಿದ್ದರೆ ನಾವೇ ಮಾಡಬಹುದಿತ್ತಲ್ಲ. ಇದು ಗೂಬೆ ಕೂರಿಸುವ ಯತ್ನ. ಇಂಥ ಕೆಲಸವನ್ನು ನಾವು ಮಾಡುವುದಿಲ್ಲ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.

ಇದು ಬಿಜೆಪಿಯ ಪ್ರಜಾಪ್ರಭುತ್ವದ ಧೋರಣೆ. ಇದಕ್ಕಿಂತ ಹೆಚ್ಚೇನು ಹೇಳುವುದಿಲ್ಲ
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ.

ಮಾಧ್ಯಮಗಳ ನಿರ್ಬಂಧ ನಮ್ಮ ಸರಕಾರದ ಅವಧಿಯಲ್ಲಿ ಮಾಡಿದ ಪ್ರಸಾವ ಅಲ್ಲ. ಸಭಾಧ್ಯಕ್ಷರು ಯಾರ ಚಿತಾವಣೆಗೆ ಮಾಡಿಕೊಂಡಿದ್ದಾರೊ ಗೊತ್ತಿಲ್ಲ. ಇದು ಬಿಜೆಪಿಯ ಅತ್ಯಂತ ತಪ್ಪು ನಿರ್ಧಾರ. ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇವೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

ಮಾಧ್ಯಮಗಳ ನಿರ್ಬಂಧ ಸರಿಯಲ್ಲ. 2008 ರಲ್ಲಿ ಅಧಿವೇಶನದಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಅದು ಮತ್ತೆ ಮರುಕಳಿಸಬಹುದು ಎನ್ನುವ ಭಯ ಬಿಜೆಪಿಯವರಿಗೆ ಕಾಡಿದೆ. ಅದಕ್ಕೆ ಮಾಧ್ಯಮಗಳನ್ನು ಹೊರಗಿಡುವ ಕೆಲಸ ಮಾಡಿದೆ. ಸರಕಾರ ಇದಕ್ಕೆ ಸದನದಲ್ಲಿ ಉತ್ತರ ಕೊಡಬೇಕಾಗುತ್ತದೆ.
-ಡಾ| ಜಿ.ಪರಮೇಶ್ವರ್‌, ಮಾಜಿ ಉಪ ಮುಖ್ಯಮಂತ್ರಿ.

ಮಾಧ್ಯಮಗಳ ಭಯದಿಂದ ಸ್ಪೀಕರ್‌ ದುರಾಲೋಚನೆಯಿಂದ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಶಾಸಕರು ಮಲಗುವುದು, ಮತ್ತೇನೋ ಮಾಡುವುದನ್ನು ತೋರಿಸುತ್ತಾರೆ ಎನ್ನುವ ಭಯ. ಎಲೆಕ್ಟ್ರಾನಿಕ್‌ ಮಾಧ್ಯಮ ನಿರ್ಬಂಧ ಸರಿಯಲ್ಲ.
-ಎಚ್‌.ಕೆ. ಪಾಟೀಲ್‌, ಮಾಜಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next