ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹರವೆ ಹೋಬಳಿಯ ಗ್ರಾಮಗಳಿಗೆ ಶಾಸಕ ಸಿ.ಎಸ್. ನಿರಂಜನ್‌ಕುಮಾರ್ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿದರು.
ತಾಲೂಕಿನ ದೇಶಿಗೌಡನಪುರ, ಕಲ್ಪುರ, ಹಳೇಪುರ, ಹರವೆ, ಸಾಗಡೆ, ಮೂಡ್ನಾಕೂಡು, ಮಲೆಯೂರು, ಕುಮಚಹಳ್ಳಿ, ಕೆಂಗಾಕಿ, ಸೇರಿದಂತೆ ಅನೇಕ ಗ್ರಾಮಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು. ಅಲ್ಲಿನ ಚಾವಡಿ ಮತ್ತು ದೇವಸ್ಥಾನಗಳ ಅವರಣದಲ್ಲಿ ಸಮಾವೇಶಗೊಂಡು ಜನರ ಸಮಸ್ಯೆಗಳನ್ನು ಆಲಿಸಿದರು.
ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ: ಸ್ಥಳದಲ್ಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜೊತೆಗೆ ರಸ್ತೆ, ಚರಂಡಿ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಗ್ರಾಮದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಗ್ರಾಮಸ್ಥರು ಮಾಡಿದ ಮನವಿಗೆ ಪೂರಕವಾಗಿ ಸ್ಪಂದಿಸಿ, ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ: ಕಲ್ಪುರ ಗ್ರಾಮದ ಬೋಳಗುಡ್ಡ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ, ಪ್ರಸಾದ ಸೇವಿಸಿದರು. ಅಲ್ಲಿ ಬಿಜೆಪಿ ಬೆಂಬಲಿತ ಡೇರಿ ನಿರ್ದೇಶಕರನ್ನು ಅಭಿನಂದಿಸಿ, ಮಾತನಾಡಿ, ಗ್ರಾಮದ ಹಾಲು ಉತ್ಪಾದಕರು ನಮ್ಮ ಪಕ್ಷದ ಮುಖಂಡರಾದ ನಿಮ್ಮಗಳ ಮೇಲೆ ವಿಶ್ವಾಸಕ್ಕೆ ಇಟ್ಟು ಹೆಚ್ಚಿನ ಮತಗಳನ್ನು ನೀಡಿ, ಗೆಲ್ಲಿಸಿದ್ದಾರೆ. ಅವರ ಆಶೋತ್ತರಗಳಿಗೆ ಸ್ಪಂದಿಸಿ, ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲ ನಿರ್ದೇಶಕರು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಡೀಸಿಗೆ ಮನವಿ ಸಲ್ಲಿಸಲು ಸೂಚನೆ: ದೇಶಿಗೌಡನಪುರದ ಮುಖ್ಯರಸ್ತೆಯ ಡಾಂಬರೀಕಣ, ಕೆರೆ ಅಭಿವೃದ್ಧಿ ಸೇರಿದಂತೆ ಸಮೀಪದಲ್ಲಿರುವ ಕಲ್ಲು ಕ್ವಾರಿಗೆ ಅನುಮತಿ ನೀಡಿದರೆ, ಗ್ರಾಮಕ್ಕೆ ತೊಂದರೆಯಾಗುತ್ತದೆ. ಅಂತರ್ಜಲ ಕಡಿಮೆಯಾಗುತ್ತದೆ. ಅಲ್ಲದೇ, ಕ್ವಾರಿಯಲ್ಲಿ ಬ್ಲಾಸ್ಟ್ ಮಾಡಿದರೆ ಗ್ರಾಮದ ಮನೆಗಳಲ್ಲಿ ನುಡುಕುತ್ತವೆ ಎಂದು ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಸ್ಥಳದಲ್ಲಿ ಇದ್ದ ಪೊಲೀಸ್ ಅಧಿಕಾರಿಗಳು ಹಾಗು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದರು.
ವಾರದೊಳಗೆ ಕಾಮಗಾರಿ ಆರಂಭ: ಕಲ್ಪುರದಿಂದ ಹರವೆ ಗ್ರಾಮದ ರಸ್ತೆ ಸಂಪೂರ್ಣ ಶಿಥಿಲವಾಗಿದೆ ಎಂಬ ಗ್ರಾಮಸ್ಥರ ಮನವಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ. ಇನ್ನು ಒಂದು ವಾರದಲ್ಲಿ ಕಾಮಗಾರಿಗೆ ಆರಂಭಿಸಲಾಗುವುದು. ಹರವೆಯಿಂದ ಕೇತಹಳ್ಳಿ ಗ್ರಾಮದ ರಸ್ತೆಯಲ್ಲಿ ಮಧ್ಯೆಯಲ್ಲಿ ಡೆಕ್ ನಿರ್ಮಾಣ, ಆಶ್ರಯ ಮನೆಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ನಿರಂಜನ್‌ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ್, ಚಾಮುಲ್ ನಿರ್ದೇಶಕ ಎಂ.ಎಸ್.ರವಿಶಂಕರ್, ಶಕ್ತಿ ಕೇಂದ್ರದ ಅಧ್ಯಕ್ಷ ಹರವೆ ಮಹೇಶ್, ಮುಖಂಡರಾದ ದೇಶಿಗೌಡನಪುರ ಪರಶಿವಮೂರ್ತಿ, ಮಲೆಯೂರು ನಾಗೇಂದ್ರ, ಅಪ್ಸರ್ ಪಾಷಾ, ಕಲ್ಪುರ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಮಾಜಿ ಅಧ್ಯಕ್ಷ ಕುಮಾರ್, ಕೆ.ಜಿ.ಶಿವಕುಮಾರ್, ಕೆ.ಜಿ. ಲೋಕೇಶ್, ಕುಮಾರ್, ವೃಷಬೇಂದ್ರ ಸ್ವಾಮಿ, ಮಹೇಶ್, ದೊರೆಸ್ವಾಮಿ, ಚಿನ್ನಸ್ವಾಮಿ, ಸುರೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜು, ಸಬ್‌ಇನ್ಸ್‌ಪೆಕ್ಟರ್ ಲೋಹಿತ್, ಹರವೆ ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಿಗರಾದ ವಿನಯ್, ಪಿಡಿಒ ಶ್ರುತಿ, ಕಾರ್ಯದರ್ಶಿ ನಂಜುಂಡಪ್ಪ ಮತ್ತಿತರರು ಹಾಜರಿದ್ದರು.