ಕುಣಿಗಲ್: ಶಾಸಕ ಡಾ.ರಂಗನಾಥ್ ಗುರುವಾರ ಕುಣಿಗಲ್ ಕ್ಷೇತ್ರದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಜೊತೆಗೆ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು.
ಮೊದಲಿಗೆ ತಮ್ಮ ಸ್ವಗ್ರಾಮ ಹೊಸಹಳ್ಳಿಯ ಮನೆ ದೇವರು ಗುಡ್ಡದ ರಂಗನಾಥ್ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರ ಸಂಚಾರಆರಂಭಿಸಿದರು. ನಂತರ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ, ಕಗ್ಗೆರೆ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ತಾಲೂಕಿನ ಎಡೆಯೂರು ಹೋಬಳಿ ಮಾದ ನಾಯಕನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ತಾಲೂಕು ಆಡಳಿತ ತೆರೆದಿರುವ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತ ಆರೋಗ್ಯ ವಿಚಾರಿಸಿದರು. ಸೋಂಕಿತರ ಆರೋಗ್ಯ ವಿಚಾರಣೆ ವೇಳೆ ಶಾಸಕ ಡಾ.ರಂಗನಾಥ್ ಮಾತನಾಡಿ, ಯಾರೂ ಕೂಡ ಆಂತಕ ಪಡುವ ಅಗತ್ಯವಿಲ್ಲ. ನಾನೆ ಕೊರೊನಾ ಸೋಂಕಿತನಾಗಿ ಈಗ ಗುಣಮುಖನಾಗಿ ಬಂದಿದ್ದೇನೆ. ಜೊತೆಗೆ ನನ್ನ ಇಡೀ ಕುಟುಂಬ ಕೂಡ ಸೋಂಕಿತರಾಗಿ ಎಲ್ಲರು ಗುಣ ಮುಖರಾಗಿ ಬಂದಿದ್ದೇವೆ. ಭಯ ಬೀಳುವ ಅಗತ್ಯ ಇಲ್ಲ ಎಲ್ಲರೂ ವ್ಯಾಯಾಮ ಮಾಡಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ ಗುಣಮುಖರಾಗಿ ಹೊರ ಬರುತ್ತೀರಿ ಎಂದು ಧೈರ್ಯ ತುಂಬಿದರು.
ತಾಲೂಕಿನ ಜನತೆ ತಮ್ಮ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಯಾರೂ ಕೂಡ ಅಗತ್ಯವಾಗಿ ಹೊರಗಡೆ ತಿರುಗಾಡಬೇಡಿ, ಯೋಗ ಧ್ಯಾನ, ವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ. ನಾನು ಕೂಡ ಗುಣಮುಖನಾಗಿ ಬಂದಿದ್ದೇನೆ. ನಿಮ್ಮ ಸೇವೆ ನಾನು ಮತ್ತು ನಮ್ಮ ತಂಡ ಸದಾ ಸಿದ್ಧವಾಗಿದೆ. ಯಾರು ಯಾವಾಗ ಬೇಕಾ ದರೂ ದೂರವಾಣಿ ಕರೆ ಮಾಡಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.