Advertisement
ಶಾಸನ ಸಭೆಯಲ್ಲಿನ ಮಾತು ಮತ್ತು ಮತಕ್ಕೆ ಸಂಬಂಧಿಸಿದಂತೆ ಅಲ್ಲಿನ ಸದಸ್ಯರಿಗೆ ಸಾಂವಿಧಾನಿಕ ರಕ್ಷಣೆಯಿದೆ. ಸಿ.ಟಿ. ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ನಡೆದಿರುವ ಮಾತಿನ ಚಕಮಕಿ ಸಂವಿಧಾನ ನೀಡಿರುವ ವಾಕ್ ರಕ್ಷಣೆಯ ವ್ಯಾಪ್ತಿಯೊಳಗೆಯೇ ಬರುತ್ತದೆ ಎಂಬುದು ಕಾನೂನು ತಜ್ಞರ ಖಚಿತ ಅಭಿಪ್ರಾಯ.
ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು, ಸದನದೊಳಗಿನ ಮಾತು ಮತ್ತು ಮತದಾನದ ಬಗ್ಗೆ ಅಲ್ಲಿನ ಸದಸ್ಯರಿಗೆ ಸಾಂವಿಧಾನಿಕ ರಕ್ಷಣೆಯಿದೆ. ಹಾಗೆಯೇ ಸದನದೊಳಗೆ ನಡೆದಿರುವ ಮಾತಿಗೆ ಸಂಬಂಧಿಸಿದಂತೆ ಸದನದ ಸುಪರ್ದಿ ಹೊತ್ತಿರುವ ಸ್ಪೀಕರ್ ಅಥವಾ ಸಭಾಪತಿ ಅವರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ಸ್ಪೀಕರ್ ಪೊಲೀಸರಿಗೆ ಸದನದ ಒಳಗೆ ಬಂದು ಸ್ಥಳ ಮಹಜರು ನಡೆಸಲು ಅವಕಾಶ ಮಾಡಿಕೊಟ್ಟರೆ, ಅದು ಅವರ ಅಧಿಕಾರವನ್ನು ಮೊಟಕು ಮಾಡಿದಂತೆಯೇ ಸರಿ. ಇದೇ ಪ್ರಕರಣವನ್ನು ಉದಾಹರಿಸಿ ಹೇಳುವುದಾದರೆ ರವಿ ಅವರನ್ನು ಲಕ್ಷ್ಮೀ ಹೆಬ್ಟಾಳ್ಕರ್ ಕೊಲೆಗಡುಕ ಎಂದು ಹೇಳಿದ್ದಾರೆ ಎಂಬ ವಾದವೂ ಇದೆ. ಈ ಬಗ್ಗೆ ರವಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದೇ ಆದಲ್ಲಿ ಆಗಲೂ ಸ್ಥಳ ಮಹಜರು ನಡೆಸಬೇಕಾಗುತ್ತದೆ. ಹೀಗೆ ಪ್ರಕರಣಗಳ ಸರಣಿ ಮುಂದುವರಿಯಬಹುದು. ಇದು ಸ್ಪೀಕರ್ ಅವರ ಸಂವಿಧಾನದತ್ತ ಅಧಿಕಾರವನ್ನು ಸಡಿಲಗೊಳಿಸಬಹುದು ಎಂದು ಅವರು ಹೇಳುತ್ತಾರೆ.
Related Articles
ಸಿ.ಟಿ. ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಶಾಸನ ಸಭೆ ಮುಂದೂಡಿಕೆ ಆಗಿದ್ದರೂ ಅಲ್ಲಿ ನಡೆದ ಮಾತಿನ ಚಕಮಕಿಯು ಕಾರ್ಯಕಲಾಪದ ಮುಂದುವರಿದ ಭಾಗವೇ ಆಗಿತ್ತು. ಆದ್ದರಿಂದ ಶಾಸಕರಿಗೆ ಸಂವಿಧಾನದ ರಕ್ಷಣೆಯಿದೆ. ಆದರೆ, ಪೊಲೀಸರು ಇಲ್ಲವೇ ದೂರುದಾರರು ಹೈಕೋರ್ಟ್‌ಗೆ ಹೋಗಲು ಅವಕಾಶ ಇದೆ ಎಂದು ಹಿರಿಯ ವಕೀಲ ಕೆ.ವಿ. ಧನಂಜಯ ಅಭಿಪ್ರಾಯಪಟ್ಟಿದ್ದಾರೆ.
Advertisement
ಶಾಸನ ಸಭೆಯಲ್ಲಿ ಚರ್ಚೆ, ಮಾತಿನ ಚಕಮಕಿ ನಡೆಯುತ್ತಿದ್ದಾಗ ಸ್ಪೀಕರ್ ಅಥವಾ ಸಭಾಪತಿ ಕಲಾಪವನ್ನು ಮುಂದೂಡಿದ ಮೇಲೆಯೂ ಚರ್ಚೆ ಮುಂದುವರಿಸಿ ಹೇಳುವ ಮಾತಿಗೆ ರಕ್ಷಣೆಯಿದೆ ಎಂದು ನಾನು ಭಾವಿಸುತ್ತೇನೆ. ಈ ಪ್ರಕರಣದಲ್ಲಿ ಸದಸ್ಯನಿಗೆ ಸಂವಿಧಾನದ ರಕ್ಷಣೆಯಿದ್ದ ಸಂದರ್ಭದಲ್ಲಿ ಆಡಿದ ಮಾತಿಗೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಮುಂದುವರಿಸಲು ಇಚ್ಚಿಸಿದರೆ ಹೈಕೋರ್ಟ್‌ಗೆ ಹೋಗಿ ಅಲ್ಲಿಂದ ನಿರ್ದೇಶನ ಪಡೆಯಬೇಕಾಗುತ್ತದೆ. ಇಲ್ಲವೇ ಪ್ರಕರಣದ ದೂರುದಾರೆ ಹೈಕೋರ್ಟ್ ಮೊರೆ ಹೋಗಬೇಕಾಗುವುದು. ಸಭಾಪತಿಯ ತೀರ್ಪನ್ನು ಉಲ್ಲಂಘಿಸಿ ಸದನ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಶಾಸಕ, ಸಂಸದರ ಸದನದೊಳಗಿನ ಮಾತಿಗೆ ಸಂವಿಧಾನದ ಸಂಪೂರ್ಣ ರಕ್ಷಣೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.