ಬೆಂಗಳೂರು: ರಾಜ್ಯದ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ ಮಾಡಲು ವಿಧೇಯಕವನ್ನು ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಇವರ ವತಿಯಿಂದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ 67ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ – 2022ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತದ ಪ್ರತಿಯೊಂದು ಭಾಷೆ ಮಾತೃಭಾಷೆ. ಎಲ್ಲ ಭಾಷೆಗಳೂ ರಾಷ್ಟ್ರಭಾಷೆ ಎಂದು ತಿಳಿಸಿದ್ದಾರೆ. ಕನ್ನಡ ನಮ್ಮ ಮಾತೃಭಾಷೆಯೂ ಹೌದು, ನಮ್ಮ ರಾಷ್ಟ್ರಭಾಷೆಯೂ ಹೌದು. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಕನ್ನಡದ ಅಭಿವೃದ್ಧಿಗಾಗಿ ರಾಜ್ಯದ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ. ಕನ್ನಡಕ್ಕೆ ಕಾನೂನಿನ ಕವಚವನ್ನು ಕೊಟ್ಟಿರುವ ಪ್ರಪ್ರಥಮ ಸರ್ಕಾರ ನಮ್ಮದು. ಈ ಕಾನೂನಿನ ಬಗ್ಗೆ ವ್ಯಾಖ್ಯಾನ, ಸಾರ್ವಜನಿಕವಾಗಿ ಮುಕ್ತಚರ್ಚೆಗಳಾಗಲಿ, ಸರ್ಕಾರ ಎಲ್ಲರ ಸಲಹೆಯನ್ನೂ ಮುಕ್ತವಾಗಿ ಸ್ವೀಕರಿಸಲಾಗುವುದು. ಕನ್ನಡ ಕಾನೂನನ್ನು ಮಾಡುವುದು ಒಂದು ಹಂತವಾದರೆ, ಕನ್ನಡಕ್ಕಾಗಿ ಬದುಕಬೇಕೆನ್ನುವ ಭಾವ ಹೃದಯಾಂತರಾಳದಿಂದ ಬರಬೇಕು. ಕನ್ನಡ ನಮ್ಮ ಅಂತರಂಗದಲ್ಲಿ, ರಾಜ್ಯದೆಲ್ಲೆಡೆ ಡಿಂಡಿಮವನ್ನು ಬಾರಿಸಲಿ. ನವಕರ್ನಾಟಕದ ನಿರ್ಮಾಣದಿಂದ ನವಭಾರತ ನಿರ್ಮಾಣವಾಗಲಿ ಎಂದರು.
ಇದನ್ನೂ ಓದಿ:ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಿಂದ ಜೀವ ಬೆದರಿಕೆ: ನಟ ಸಲ್ಮಾನ್ ಖಾನ್ ಗೆ Y+ ಭದ್ರತೆ
ಒಂದೇ ವರ್ಷದಲ್ಲಿ 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ: ಶಿಕ್ಷಣದಲ್ಲಿ ಈ ವರ್ಷ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇದೊಂದು ದಾಖಲೆ. 1956 ರಲ್ಲಿ ಕರ್ನಾಟಕ ರಚನೆಯಾದ ಮೇಲೆ ಯಾವುದೇ ಸರ್ಕಾರ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಮುಂದಿನ ಮೂರು ವರ್ಷ ಈ ಕೆಲಸ ಮಾಡಿದರೆ ಶಾಲಾ ಕೊಠಡಿಗಳ ಕೊರತೆ ಆಗುವುದಿಲ್ಲ. ‘ವಿವೇಕ’ಎಂಬ ಹೆಸರಿನಿಂದ ಕಾರ್ಯಕ್ರಮ ಜಾರಿಯಾಗುತ್ತಿದೆ ಎಂದರು.