ಮಣಿಪಾಲ: ‘ಬೋಳಂತೂರು ಕಾಟಿ’ ಕಂಬಳದ ಇತಿಹಾಸದಲ್ಲಿ ದೊಡ್ಡ ಸಾಧನೆ ಮಾಡಿದ ಕೋಣ. ಹಲವು ವರ್ಷಗಳ ಕಾಲ ಚಿಗರೆಯಂತೆ ಕಂಬಳದ ಕೆಸರು ನೀರಿನಲ್ಲಿ ಓಡಿದ ಕಾಟಿ, ಇಂದು ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದೆ.
28 ವರ್ಷ ಪ್ರಾಯದ ಕಾಟಿ, ಕಳೆದ 20 ವರ್ಷಗಳಿಂದ ಬೋಳಂತೂರು ಮನೆಯಲ್ಲಿ ಇದ್ದಾತ. ಕಂಬಳ ಕ್ಷೇತ್ರದಲ್ಲಿ ದಿ.ಬೋಳಂತೂರು ಗಂಗಾಧರ ರೈಗಳ ಹೆಸರು ಹೇಗೋ, ಅದೇ ಪ್ರಸಿದ್ದಿ ಪಡೆದ ಕೋಣ ಈ ಕಾಟಿ.
ಬಾಲ್ಯದಲ್ಲಿ ಕಾಟಿಯನ್ನು ಪೋಷಿಸಿದವರು ಬಾರ್ಕೂರು ದೇವದಾಸ ಗಡಿಯಾರ್ ಅವರು. ನೇಗಿಲು ಕಿರಿಯ ವಿಭಾಗದಲ್ಲಿ ಕಂಬಳ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಕಾಟಿ, ಶಿರ್ವ ಕಂಬಳದಲ್ಲಿ ಮೊದಲ ಸಲ ಬಹುಮಾನ ಪಡೆದಿದ್ದ. ಅಂದು ಕಾಟಿಗೆ ಸಾರಥಿಯಾಗಿದ್ದು, ಶಿರ್ವ ವಿಶ್ವನಾಥ್ ಪ್ರಭು.
ಮುಂದೆ ಮೂರು ವರ್ಷ ಕಿರಿಯ ನೇಗಿಲು ವಿಭಾಗದಲ್ಲಿ ಕಾಟಿಯದ್ದೇ ಪಾರುಪತ್ಯ. ಆದರೆ ಕಾಟಿಗೆ ಜೋಡಿಯಾಗಿ ಓಡಲು ಸರಿಯಾದ ಕೋಣಗಳೇ ಸಿಗುತ್ತಿರಲಿಲ್ಲ. ಹಾಗಾಗಿ ಮೂರು ವರ್ಷದಲ್ಲಿ ನಾಲ್ಕು ಕೋಣಗಳ ಜೋಡಿಯಾಗಿ ಕಾಟಿ ಓಡಿದ್ದ. ಮುಂದೆ ಸೀನಿಯರ್ ವಿಭಾಗಕ್ಕೆ ಅರ್ಹತೆ ಪಡೆದ ಕಾಟಿಗೆ ಸರಿಯಾದ ಜೋಡಿಯ ಹುಡುಕಾಟದಲ್ಲಿದ್ದಾಗ ಬಾರ್ಕೂರು ಶಾಂತರಾಮ ಶೆಟ್ಟರು ಬಾರ್ಕೂರು ದೇವದಾಸ ಗಡಿಯಾರ್ ರೊಂದಿಗೆ ಕೈಜೋಡಿಸಿದ್ದರು. ಶಾಂತಾರಾಮ ಶೆಟ್ಟರ ‘ಮೋಡ’ ಕೋಣದ ಜೊತೆ ನೇಗಿಲು ಹಿರಿಯ ವಿಭಾಗದಲ್ಲಿ ಕಾಟಿಯ ಓಟ. ಅದರ ವೇಗ ಎಷ್ಟಿತ್ತೆಂದರೆ ಹಿರಿಯ ವಿಭಾಗಕ್ಕೆ ಅರ್ಹತೆ ಪಡೆದ ಮೊದಲ ವರ್ಷವೇ ‘ಚಾಂಪಿಯನ್ ಇಯರ್ ಆಫ್ ದಿ ಪುರಸ್ಕಾರ’
1998ರಲ್ಲಿ ಬೆಳುವಾಯಿ ಸದಾನಂದ ಶೆಟ್ಟಿಯವರು ಕಾಟಿಯನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಅವರ ‘ಮಾತಿಬೆಟ್ಟು’ ಎಂಬ ಕೋಣದ ಜೊತೆ ಸೇರಿದ ಕಾಟಿ ಹಗ್ಗ ಹಿರಿಯ ವಿಭಾಗಕ್ಕೆ ಬಂದಿದ್ದ. ಅಲ್ಲೂ ಕಾಟಿಯ ಪರಾಕ್ರಮ ಮುಂದುವರಿದಿತ್ತು.
2001ರಲ್ಲಿ ಬೋಳಂತೂರು ಗಂಗಾಧರ ರೈ ಅವರು ಕಾಟಿ- ಮಾತಿಬೆಟ್ಟು ಜೋಡಿಯನ್ನು ಖರೀದಿಸಿದರು. ಈದು ಪಡ್ಯಾರು ಅಶೋಕ್ ಜೈನರು ಈ ಕೋಣಗಳನ್ನು ಓಡಿಸುತ್ತಿದ್ದರು. ಬೋಳಂತೂರು ಬಳಗಕ್ಕೆ ಸೇರಿದ ಕಾಟಿ ಮುಂದೆ ಸತತ ಮೂರು ವರ್ಷ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿದ್ದ. ಮುಂದೆ 2012ರವರೆಗೂ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಶಸ್ತಿ ಬೇಟೆ ಮುಂದುವರಿಸಿದ ಕಾಟಿ, 2015ರಲ್ಲಿ ಕನೆಹಲಗೆ ವಿಭಾಗಕ್ಕೆ ಎಂಟ್ರಿ ಕೊಟ್ಟು ಅಲ್ಲೂ ಪ್ರಶಸ್ತಿ ಪಡೆದಿದ್ದ.
ಮೂರು ವರ್ಷದ ಹಿಂದೆ ಪುತ್ತೂರು ಕೋಟಿ- ಚೆನ್ನಯ ಕಂಬಳದ 25ನೇ ವರ್ಷಾಚರಣೆ ಸಂದರ್ಭದಲ್ಲಿ ಬೋಳಂತೂರು ಕಾಟಿಗೂ 25 ವರ್ಷ. ಆಗ ಕಾಟಿಗೆ ಅದ್ದೂರಿ ಸನ್ಮಾನ ಮಾಡಲಾಗಿತ್ತು.
ಕಳೆದ ಕೆಲವು ವರ್ಷಗಳಿಂದ ವಿಶ್ರಾಂತಿಯಲ್ಲಿದ್ದ ಬೋಳಂತೂರು ಕಾಟಿ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಸೋಮವಾರ ಬೆಳಗ್ಗೆ ಅಸುನೀಗಿದೆ.