Advertisement
ಶೆಹನಾಯಿ ಮಾಂತ್ರಿಕನೆಂದೇ ಪ್ರಪಂಚದ ಮುಖಕ್ಕೆ ಪರಿಚಿತರಾದ ಸರಳ ವ್ಯಕ್ತಿ , ರಾಗ ಸಂಚಾರದ ಶಕ್ತಿ ಬಿಸ್ಮಿಲ್ಲಾ ಖಾನ್ ಅವರು 1916, ಮಾರ್ಚ್ 21 ರಂದು ಬ್ರಿಟಿಷ್ ಇಂಡಿಯಾದ ಡುಮ್ರಾನ್ ಪಟ್ಟಣದಲ್ಲಿ(ಬಿಹಾರ) ಸಾಂಪ್ರದಾಯಿಕ ಮುಸ್ಲಿಂ ಸಂಗೀತಗಾರರ ಕುಟುಂಬದಲ್ಲಿ ಪೈಗಂಬರ್ ಬಕ್ಸ್ ಖಾನ್ ಮತ್ತು ಮಿತ್ತನ್‌ಬೈ ಅವರ ಎರಡನೇ ಮಗನಾಗಿ ಜನಿಸಿದರು. ಅವರ ತಂದೆ ಬಿಹಾರದ ಡುಮ್ರಾನ್ ಎಸ್ಟೇಟ್‌ನ ಮಹಾರಾಜ ಕೇಶವ್ ಪ್ರಸಾದ್ ಸಿಂಗ್ ಅವರ ಆಸ್ಥಾನದಲ್ಲಿ ಸಂಗೀತಗಾರರಾಗಿದ್ದರು. ಅವರ ಇಬ್ಬರು ತಾತ ಉಸ್ತಾದ್ ಸಲಾರ್ ಹುಸೇನ್ ಖಾನ್ ಮತ್ತು ರಸೂಲ್ ಬಕ್ಸ್ ಖಾನ್ ಕೂಡ ಡುಮ್ರಾನ್ ಅರಮನೆಯಲ್ಲಿ ಸಂಗೀತಗಾರರಾಗಿದ್ದರು. ಅವರ ಅಣ್ಣನ ಹೆಸರು ಶಂಸುದ್ದೀನ್ ಆಗಿದ್ದ ಕಾರಣ ಪ್ರಾಸ ಬದ್ಧವಾಗಿ ಕಮ್ರುದ್ದೀನ್ ಎಂದು ಇಡಲಾಯಿತಾದರೂ ಪ್ರಪಂಚಕ್ಕೆ ಬಿಸ್ಮಿಲ್ಲಾ ಎಂದೇ ಜನಪ್ರಿಯರಾದರು. ಅವರ ಅಜ್ಜ ರಸೂಲ್ ಬಕ್ಷ್ ಖಾನ್ “ಬಿಸ್ಮಿಲ್ಲಾ”ಎಂದು ಕರೆದಿದ್ದರಿಂದ ಆ ಹೆಸರೇ ಶಾಶ್ವತ ಕೀರ್ತಿ ಶೇಷವಾಗಿ ಉಳಿಯಿತಂತೆ.
Related Articles
Advertisement
ಮೇರು ಸಾಧಕನ ಅಮೋಘ ಸಾಧನೆಯನ್ನು ಪರಿಗಣಿಸಿ ಸಂದ ಗೌರವಗಳಿಗೆ ಲೆಕ್ಕವೇ ಇಲ್ಲ. ಪ್ರಮುಖವಾಗಿ ಸರಕಾರ 2001 ರಲ್ಲಿ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. 1961 ರಲ್ಲಿ ಪದ್ಮಶ್ರೀ, 1968 ರಲ್ಲಿ ಪದ್ಮಭೂಷಣ 1980 ರಲ್ಲಿ ಪದ್ಮವಿಭೂಷಣ,1956 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1995 ರಲ್ಲಿ ಕರ್ನಾಟಕ ಸರಕಾರ ಟಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕೇರಳ ಸರಕಾರದಿಂದ 1998 ರಲ್ಲಿ ಸ್ವಾತಿ ಸಂಗೀತ ಪುರಸ್ಕಾರಂ, 1992 ರಲ್ಲಿ ಇರಾನ್‌ನಿಂದ ತಹರ್ ಮೌಸಿಕ್, ಮಧ್ಯಪ್ರದೇಶ ಸರಕಾರದಿಂದ ತಾನ್ಸೇನ್ ಪ್ರಶಸ್ತಿ ಸೇರಿದಂತೆ ಸಾವಿರಾರು ಪುರಸ್ಕಾರಗಳಿಗೆ ಭಾಜನರಾಗಿದ್ದರು.ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ ಮತ್ತು ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಡಾ. ರಾಜ್ ಕುಮಾರ್ ಚಿತ್ರದಲ್ಲೂ ಮೋಡಿ
ವರನಟ ಡಾ.ರಾಜಕುಮಾರ್ ಅವರು ಅಭಿನಯಿಸಿದ ”ಸನಾದಿ ಅಪ್ಪಣ್ಣ”ಚಿತ್ರದಲ್ಲಿ ಡಾ. ರಾಜ್ ಅವರ ಪಾತ್ರಕ್ಕೆ ಶೆಹನಾಯಿ ನುಡಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ವಿಶೇಷ ಸ್ಮರಣೀಯ ಕೊಡುಗೆ ನೀಡಿದರು. ಅವರು ಸತ್ಯಜಿತ್ ರೇ ಅವರ ಜಲಸಾಗರ್‌ನಲ್ಲಿ ಮತ್ತು ವಿಜಯ್ ಭಟ್ ಅವರ ಗೂಂಜ್ ಉಟಿ ಶೆಹನಾಯ್ (1959) ಮೂಲಕ ಹಿಂದಿ ಚಿತ್ರರಂಗಕ್ಕೂ ಕೊಡುಗೆ ನೀಡಿದರು.
17 ಆಗಸ್ಟ್ 2006 ರಂದು ಜೀವನಯಾತ್ರೆಯ ಸ್ವರ ಸಂಚಾರ ಶಾಶ್ವತವಾಗಿ ನಿಲ್ಲಿಸಿದ ಖಾನ್ ಅವರು ಇಂದಿಗೂ ಸಂಗೀತ ಲೋಕದಲ್ಲಿ ಜೀವಂತವಾಗಿ ತನ್ನ ಸಾವಿರಾರು ಧ್ವನಿ ಮುದ್ರಣಗಳೊಂದಿಗೆ ಉಳಿದುಕೊಂಡಿದ್ದಾರೆ.
ವಿಷ್ಣುದಾಸ್ ಪಾಟೀಲ್