Advertisement

ಕಾನೂನು ಬದ್ಧವಾಗಿ ಜಿಂದಾಲ್ಗೆ ಶುದ್ಧ ಕ್ರಯ

09:02 AM Jun 04, 2019 | Suhan S |

ಬಳ್ಳಾರಿ: ಜಿಲ್ಲೆಯ ತೋರಣಗಲ್ಲು ಬಳಿಯ ಜೆಎಸ್‌ಡ್ಲು ಉಕ್ಕು ಕಾರ್ಖಾನೆಗೆ ಜಮೀನು ಪರಭಾರೆ ಮಾಡಲು ಹೊರಟಿರುವ ಮೈತ್ರಿ ಸರ್ಕಾರದ ನಿರ್ಣಯ ಕಾನೂನು ಬದ್ಧವಾಗಿದ್ದರೂ, ಮಾಜಿ ಸಚಿವ ಎಚ್.ಕೆ.ಪಾಟೀಲರು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಸ್ವಪಕ್ಷದ ಮುಖಂಡರಿಗೆ ಟಾಂಗ್‌ ನೀಡಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಿಂದಾಲ್ ಸಂಸ್ಥೆ ಪರವಾಗಿ ಬ್ಯಾಟಿಂಗ್‌ ಮಾಡಿದ ಅವರು, ರಾಜ್ಯದ ಮೈತ್ರಿ ಸರ್ಕಾರ ಕೈಗೊಂಡಿರುವ ನಿರ್ಣಯ ನ್ಯಾಯಸಮ್ಮತ, ಕಾನೂನು ಬದ್ಧವಾಗಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಆದರೂ, ಈ ವಿಷಯದಲ್ಲಿ ವಿವಾದ ಸೃಷ್ಟಿಯಾಗುತ್ತಿರುವುದು ಸರಿಯಲ್ಲ. ಕಾನೂನು ಬದ್ಧವಾದ ಶುದ್ಧ ಕ್ರಯ ವ್ಯವಹಾರ ಕುರಿತು ಎಚ್.ಕೆ. ಪಾಟೀಲ್ ನೀಡಿದ ಹೇಳಿಕೆಯೂ ಸರಿಯಿಲ್ಲ. ಈ ಹಿಂದೆ ಗದುಗಿಗೆ ದಕ್ಷಿಣ ಕೋರಿಯಾದ ಪೋಸ್ಕೋ ಕಂಪನಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಬಂದಾಗ ಪಾಟೀಲ್ರು ವಿರೋಧಿಸಿದ್ದರಿಂದಲೇ ಆ ಕಂಪನಿ ಒಡಿಸ್ಸಾಗೆ ಸ್ಥಳಾಂತರಗೊಂಡಿತು. ಇದರಿಂದ ಗದಗ ಜಿಲ್ಲೆ ಔದ್ಯಮೀಕರಣದಿಂದ ವಂಚಿತ ಆಯಿತು. ಅವರಿಗೆ ಅನುಮಾನವಿದ್ದಲ್ಲಿ ಬಳ್ಳಾರಿಯವರೇ ಆದ ನನ್ನನ್ನು ಕೇಳಬಹುದಿತ್ತು. ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಟೀಕಿಸಿದರು.

ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರು 1970ರಲ್ಲಿ ಆಂಧ್ರದ ವಿಶಾಖಪಟ್ಟಣಂ, ಸೇಲಂ ಮತ್ತು ಬಳ್ಳಾರಿಯ ತೋರಣಗಲ್ಲುನಲ್ಲಿ 3 ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸೇಲಂನಲ್ಲಿ ಮೂಲಸೌಲಭ್ಯಗಳು ಇಲ್ಲದಿದ್ದರೂ, ವಿಶಾಖಪಟ್ಟಣಂದಲ್ಲಿ ಸಮುದ್ರ ದಂಡೆಯಲ್ಲಿದ್ದರೂ ಎರಡೂ ಕಡೆ ಕಾರ್ಖಾನೆ ಆರಂಭವಾಯಿತು. ಬಳ್ಳಾರಿಯಲ್ಲಿ ಮಾತ್ರ ಕಾರ್ಖಾನೆ ಆರಂಭವಾಗಿರಲಿಲ್ಲ. ಎರಡು ದಶಕಗಳ ಬಳಿಕ ಕಾರ್ಖಾನೆ ಆರಂಭಕ್ಕೆ ಚಾಲನೆ ದೊರೆಯಿತು. ಆಗ ಜಿಂದಾಲ್ ಸಂಸ್ಥೆಗೆ ಎಕರೆಗೆ 45 ಸಾವಿರ ರೂ. ಬೆಲೆಯಂತೆ ಒಟ್ಟು 3695 ಎಕರೆ ಜಮೀನು ನೀಡಲಾಯಿತು. ಜೆವಿಎಸ್‌ಎಲ್ನ ಪೂರಕ ಕೈಗಾರಿಕಾ ಘಟಕಕ್ಕೂ 250 ಎಕರೆ ಜಮೀನು ಕಾಯ್ದಿರಿಸಲಾಯಿತು. ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶದಿಂದ ಎಕರೆಗೆ 5 ಸಾವಿರ ರೂ. ಹೆಚ್ಚುವರಿ ಪರಿಹಾರವನ್ನೂ ನೀಡಲಾಯಿತು ಎಂದು ವಿವರಿಸಿದರು.

ಜಿಂದಾಲ್ ಕಂಪನಿಗೆ 1996ರಲ್ಲಿ 3430.16 ಎಕರೆ ಭೂಮಿಯನ್ನು 10 ವರ್ಷಗಳ ಅವಧಿಗೆ ಲೀಸ್‌ ಕಂ ಸೇಲ್ ಕರಾರು ನೀಡಲಾಗಿತ್ತು. ಇದನ್ನು 2005ರಲ್ಲಿ ಶುದ್ಧ ಕ್ರಯಕ್ಕೆ ಪರಿವರ್ತಿಸಲಾಯಿತು. ಪುನಃ 2004ರಲ್ಲಿ ಕಾರ್ಖಾನೆ ವಿಸ್ತರಣೆಗೆ 615 ಎಕರೆ ಭೂಮಿಯನ್ನು ಲೀಸ್‌ ಕಂ ಸೇಲ್ ಕರಾರಿನಡಿ ನೀಡಲಾಗಿತ್ತು. ಇದನ್ನು 2010ರಲ್ಲಿ ಶುದ್ಧ ಕ್ರಯಕ್ಕೆ ನೀಡಲಾಯಿತು. ಇದೇ ರೀತಿ 2005ರಲ್ಲೂ ಮಾಡಲಾಗಿದೆ. 2007ರಲ್ಲಿ 1666.67 ಎಕರೆ ಜಮೀನನ್ನು ಲೀಸ್‌ ಕಂ ಸೇಲ್ ಕರಾರಿನಡಿ ನೀಡಲಾಗಿತ್ತು. ಈ ಅವಧಿ 2017 ಅಕ್ಟೋಬರ್‌ 24ಕ್ಕೆ ಕರಾರು ಕೊನೆಯಾಗಿದ್ದು, ಈ ಹಿಂದಿನಂತೆ ಶುದ್ಧ ಕ್ರಯಕ್ಕೆ ನೀಡಲು ಅವಕಾಶವಿದೆ. ಇದರಲ್ಲಿ ಎಲ್ಲೂ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಪುನರುಚ್ಛರಿಸಿದರು.

ಹಾಲಿ ಜೆಎಸ್‌ಡಬ್ಲು ಒಟ್ಟು 62,035 ಸಾವಿರ ಕೋಟಿ ರೂ. ಬಂಡವಾಳ ಹೂಡಿದೆ. ಇದರಲ್ಲಿ ಸ್ಟೀಲ್ ಲಿಮಿಟೆಡ್‌ಗೆ 54ಸಾವಿರ ಕೋರಿ, ಎನರ್ಜಿಗೆ 3025 ಕೋಟಿ ರೂ., ಸಿಮೆಂಟ್, ಜೆಪಿಒಸಿಎಲ್, ಪೇಂಟ್ಸ್‌ ಇತರೆ ಸೇರಿ 200 ಕೋಟಿ ರೂ. ಪ್ರೊಜೆಕ್ಟ್ಗೆ 3000 ಕೋಟಿ ರೂ. ಸೇರಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಜೆಎಸ್‌ಡಬ್ಲು ್ಯ ಒಟ್ಟಾರೆ 80 ಸಾವಿರ ಕೋಟಿ ರೂ. ತೆರಿಗೆ ಪಾವತಿಸಿದೆ. ಜೆಎಸ್‌ಡಬ್ಲುನಿಂದ ನೇರ 25 ಸಾವಿರ ಜನರಿಗೆ ಕೆಲಸ ನೀಡಿದರೆ, ಪರೋಕ್ಷವಾಗಿ 2 ಲಕ್ಷ ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಆದ್ಯತೆ ನೀಡಿದೆ ಎಂದು ತಿಳಿಸಿದರು.

Advertisement

ಉಕ್ಕು ಅದಿರು ಹೆಚ್ಚಾಗಿರುವ ಜಿಲ್ಲೆಯಲ್ಲಿಯೇ ಕಬ್ಬಿಣ ತಯಾರಿಕೆ ಮಾಡುತ್ತಿರುವ ಕಂಪನಿಯಿಂದ ಸಾಕಷ್ಟು ಉಪಯೋಗ ಆಗಿದೆ. ಇದನ್ನು ಮನವರಿಕೆ ಮಾಡಿಕೊಳ್ಳಬೇಕು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಕಾರ್ಖಾನೆ ಪೂರಕ. ಇದೇ ಕಾರಣಕ್ಕೆ ಅರ್ಸೆನಲ್ ಮಿತ್ತಲ್, ಭೂಷಣ್‌ ಸ್ಟೀಲ್, ಎನ್‌ಡಿಎಂಸಿಗೆ ತಲಾ 3 ಸಾವಿರ ಎಕರೆ ಭೂಮಿ ನೀಡಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಘನಮಲ್ಲನಗೌಡ, ಕನಕದುರ್ಗಮ್ಮ ದೇವಸ್ಥಾನದ ಧರ್ಮಕರ್ತ ಪಿ.ಗಾದೆಪ್ಪ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next