ಹುಬ್ಬಳ್ಳಿ: ಆನ್‌ಲೈನ್ ಅಥವಾ ಅಸೈನ್ ಮೆಂಟ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾಗೂ ಕೆಎಸ್‌ಎಲ್‌ಯು ವಿದ್ಯಾರ್ಥಿ ಒಕ್ಕೂಟ ನೇತೃತ್ವದಲ್ಲಿ ಗುರುವಾರ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿದರು.
ನವನಗರದ ಆರ್‌ಟಿಒ ಕಚೇರಿಯಿಂದ ಕೆಎಸ್‌ಎಲ್‌ಯುವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ನಂತರ ವಿವಿ ಪ್ರವೇಶದ್ವಾರದ ಎದುರು ಜಮಾಯಿಸಿ ಕುಲಪತಿ ವಿರುದ್ಧ ಘೋಷಣೆ ಕೂಗಿದರು. ಪ್ರವೇಶ ದ್ವಾರ ಬಳಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ವಿವಿ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ತಳ್ಳಾಟ, ನೂಕಾಟ ಹಾಗೂ ಪರಸ್ಪರ ಮಾತಿನ ಚಕಮಕಿ ನಡೆಯಿತು. ವಿದ್ಯಾರ್ಥಿಗಳನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು.
ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಹೊರಡಿಸಿರುವ ಆದೇಶದಲ್ಲಿ ನಾಲ್ಕು ವಿಧದಲ್ಲಿ ವಿವಿ ಪರೀಕ್ಷೆ ನಡೆಸುವ ಅವಕಾಶವಿರುವ ಬಗ್ಗೆ ಉಲ್ಲೇಖೀಸಿದೆ. ಈ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ವಿವಿ ಹೊಂದಿದೆ. ಕೆಎಸ್‌ಎಲ್‌ಯು ವಿದ್ಯಾರ್ಥಿಗಳ ಪರೀಕ್ಷೆ ಈಗಾಗಲೇ ಐದು ತಿಂಗಳು ವಿಳಂಬವಾಗಿದೆ. ಶೈಕ್ಷಣಿಕ ವರ್ಷದಲ್ಲಿ ಬೇರೆ ವಿವಿಗಳಿಗಿಂತ ಈ ವಿವಿಯ 3 ಮತ್ತು 5ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ.
ಮುಂದಿನ ಉನ್ನತ ಶಿಕ್ಷಣ ಹಾಗೂ ಭವಿಷ್ಯದ ದೃಷ್ಟಿಯಿಂದ ಆನ್‌ಲೈನ್ ಮೂಲಕ ಪರೀಕ್ಷೆ ಮುಗಿಸಬೇಕು ಹಾಗೂ ತಕ್ಷಣ ಫಲಿತಾಂಶ ಪ್ರಕಟಿಸಲು ಇರುವ ಕಾನೂನಾತ್ಮಕ ತೊಡಕನ್ನು ನ್ಯಾಯಾಲಯ ಮೂಲಕ ಬಗೆಹರಿಸಬೇಕೆಂದು ಆಗ್ರಹಿಸಿದರು. ಕುಲಪತಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಈಗಲೇ ತಮ್ಮ ನಿರ್ಧಾರ ತಿಳಿಸಬೇಕೆಂದು ಪಟ್ಟು ಹಿಡಿದರು. ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಕೊನೆಗೆ ವಿವಿ ಕಚೇರಿ ಆವರಣದೊಳಗೆ ನುಗ್ಗಿ ಪ್ರತಿಭಟಿಸಿದರು.
ಬೇಡಿಕೆ ಈಡೇರಿಕೆಗಾಗಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್ ಯುಐ) ಸದಸ್ಯರು ನಾಲ್ಕು ದಿನಗಳಿಂದ ವಿವಿ ಪ್ರವೇಶ ದ್ವಾರ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ಎಬಿವಿಪಿ ವಿದ್ಯಾರ್ಥಿಗಳ ಬೇಡಿಕೆಗೆ ಅವರು ಧ್ವನಿಗೂಡಿಸಿದ್ದರಿಂದ ಪ್ರತಿಭಟನೆ ತೀವ್ರಗೊಂಡಿತು. ಎಬಿವಿಪಿ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ, ತೇಜಸ ಗೋಕಾಕ, ಸಚಿನ ಕುಳಗೇರಿ, ಐಶ್ಚರ್ಯ ಶೆಟ್ಟಿ, ಗಂಗಾಧರ ಹಂಜಗಿ ಮೊದಲಾದವರಿದ್ದರು.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅವರು ನೀಡಿದ ನಾಲ್ಕು ನಿಯಮದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಿದೆ. ಈಗಾಗಲೇ ಆಫ್‌ಲೈನ್ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ. ಆದರೆ ಇದರಿಂದ ವಿದ್ಯಾರ್ಥಿಗಳ ವಾರ್ಷಿಕ ಅವಧಿ ತಡವಾಗಿ ಮುಗಿಯುತ್ತದೆ. ಆದ್ದರಿಂದ ಅಸೈನ್‌ಮೆಂಟ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು.
ಪ್ರತೀಕ್ ಮಾಳಿ,
ಎಬಿವಿಪಿ ರಾಜ್ಯ ಕಾರ್ಯದರ್ಶಿ
ಕೋವಿಡ್‌ನಿಂದ ಇಡೀ ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದೆ. ಕಾನೂನು ವಿದ್ಯಾರ್ಥಿಗಳು ಅಧ್ಯಯನ ಮುಗಿಸಿ ಮುಂದಿನ ಶೈಕ್ಷಣಿಕ ವರ್ಷ ಆರಂಭ ಮಾಡಬೇಕಾಗಿತ್ತು. ಆದರೆ ವಿಶ್ವವಿದ್ಯಾಲಯದ ಅವೈಜ್ಞಾನಿಕ ನಿರ್ಧಾರದಿಂದ ವಿದ್ಯಾಥಿಗಳ ಭವಿಷ್ಯಕ್ಕೆ ಕಂಟಕ ಎದುರಾಗಿದೆ.
ಮಣಿಕಂಠ ಕಳಸ,
ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ