ತುಮಕೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗುವ ವ್ಯಕ್ತಿಗಳಿಗೆ ಕಾನೂನು ನೆರವು ನೀಡುವ ಸಲುವಾಗಿ ಪೊಲೀಸ್ ಠಾಣೆಗಳಲ್ಲಿ ಕಾನೂನು ಸೇವಾ ಕೇಂದ್ರ ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವ ಕುಮಾರ್ ಸಲಹೆ ನೀಡಿದರು.
ನಗರದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಆಯ್ದ ಪೊಲೀಸ್ ಠಾಣೆಯಲ್ಲಿ ಕಾನೂನು ಸೇವಾ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಇಂದು ಮೊದಲ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ ಎಂದರು.
ದಸ್ತಗಿರಿ ಆಗಿ ಬಂದ ಆರೋಪಿಗಳು ಹಾಗೂ ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರಿಗೆ ಕಾನೂನು ನೆರವು, ಸಹಾಯ ನೀಡುವ ಮೂಲಕ ಸಣ್ಣ-ಪುಟ್ಟ ಸಮಸ್ಯೆಗಳಿಗೆ ನ್ಯಾಯಾಲಯಕ್ಕೆ ಬರುವ ಮೊದಲು ರಾಜಿಯಾಗುವ ಪ್ರಕರಣ ಪೊಲೀಸ್ ಠಾಣೆಯಲ್ಲಿ ಬಗೆ ಹರಿಸಿಕೊಳ್ಳುವುದು ಕಾನೂನು ಸೇವಾ ಕೇಂದ್ರದ ಉದ್ದೇಶವಾಗಿದೆ ಎಂದು ಹೇಳಿದರು.
ಸೇವಾ ಕೇಂದ್ರದಲ್ಲಿ ಒಬ್ಬರು ನುರಿತ ವಕೀಲರು ಮಂಗಳವಾರ ಹಾಗೂ ಶುಕ್ರವಾರದಂದು ಲಭ್ಯವಿದ್ದು, ಠಾಣೆಗೆ ಬರುವ ಆರೋಪಿಗಳು ಸಾರ್ವಜನಿಕರು ಸೂಕ್ತ ಕಾನೂನಿನ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಬಹುದು. ಕಾನೂನಿನ ಬಗ್ಗೆ ಅನೇಕರಿಗೆ ತಿಳಿವಳಿಕೆ ಇರುವುದಿಲ್ಲ. ಹೀಗಾಗಿ ಅವರು ಹಕ್ಕುಗಳಿಂದ ವಂಚಿತರಾಗ ಬಾರದು. ಕಾನೂನಿನ ನೆರವು ಅವಶ್ಯಕತೆ ಇರುವವರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾನೂನಿನ ನೆರವು ಅಗತ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋ.ನ ವಸಿಕೃಷ್ಣ ಮಾತನಾಡಿ, ಪೊಲೀಸ್ ಠಾಣೆಗೆ ಬರುವ ಆರೋಪಿಗಳಿಗೆ, ಸಾರ್ವಜನಿಕರಿಗೆ ಸಲಹೆ, ಮಾರ್ಗದರ್ಶನ ನೀಡುವುದಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಿಲಕ್ ಪಾರ್ಕ್ ಠಾಣೆಯಲ್ಲಿ ಜಿಲ್ಲಾ ಕಾನೂನು ಸೇವಾ ಕೇಂದ್ರ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಪೊಲೀಸ್‌ಠಾಣೆ ಸೇರಿ ಸುಮಾರು 12 ಠಾಣೆಯಲ್ಲಿ ಸೇವಾಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಠಾಣೆಗೆ ಬರುವ ಪ್ರತಿಯೊಬ್ಬರಿಗೂ ಕಾನೂನಿನ ನೆರವು ಅಗತ್ಯ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅನಿಲ್, ಸಲಹೆಗಾರ ಭೋಜರಾಜು, ವಕೀಲರಾದ ದೇವರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಪಾರ್ವತಮ್ಮ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳಾದ ಭಾಗ್ಯಲಕ್ಷಿ, ನವೀನ್, ಹನುಮಂತರಾತಯಪ್ಪ, ಅಬ್ದುಲ್ ಕಹೀಮ್, ಶೆಟ್ಟಪ್ಪ, ಮತ್ತಿತರ ಸಿಬ್ಬಂದಿ ಇದ್ದರು.