ಚುನಾವಣೆಯ (ಮೇ 12) ಪೂರ್ವಭಾವಿಯಾಗಿ ಅತ್ಯಂತ ಸುದ್ದಿಯ ಸದ್ದನ್ನು ಉಂಟು ಮಾಡಿದೆ. ಭಾರತೀಯ ಚುನಾವಣಾ ಆಯೋಗದ ನಿಯಮಗಳಿಗೆ ಅನುಸಾರವಾಗಿ ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಮೇಲ್ನೋಟಕ್ಕೆ ಹೇಳಬಹುದು. ಆದರೆ ಇದು ಈಗಾಗಲೇ ಅನೇಕಾನೇಕ ವಿರೋಧಾಭಾಸಗಳನ್ನು ಉಂಟು ಮಾಡಿದೆ.
ಚುನಾವಣೆಯ ಅಧಿಕೃತ ಘೋಷಣೆಯಾದ ಕೂಡಲೇ ಈ ನಿಯಮಗಳು ಅನುಷ್ಠಾನಗೊಳ್ಳುತ್ತವೆ. ಆದರೆ ದೈನಂದಿನ ಜೀವನಕ್ಕೆ ಅಡೆತಡೆ ಉಂಟಾಗುವಂತೆ ಈ ಹಿಂದೆಂದೂ (ಈ ಕ್ರಮಗಳ ಅನುಷ್ಠಾನದ ರೂವಾರಿಯಾಗಿದ್ದ ಟಿ. ಎನ್. ಶೇಷನ್ ಅವರು ಭಾರತದ ಮುಖ್ಯ ಚುನಾವಣಾಧಿಕಾರಿ ಆಗಿದ್ದಾಗಲೂ ಕೂಡ) ಅನುಷ್ಠಾನದ ಪ್ರಭಾವವಿರಲಿಲ್ಲ. ಮದುವೆ ಇತ್ಯಾದಿ ಶುಭ ಕಾರ್ಯಗಳಿಗೂ ಚುನಾವಣಾ ಕಾನೂನಿಗೂ ಏನು ಸಂಬಂಧ?
ಅನುಷ್ಠಾನದ ಅಧಿಕಾರಿಗಳು ಒಂದಿಷ್ಟು ‘ಅತ್ಯುತ್ಸಾಹ’ ತೋರಿದ್ದಾರೆ ಮತ್ತು ಅನುಷ್ಠಾನವನ್ನು ಸಮರ್ಪಕವಾಗಿ ವ್ಯಾಖ್ಯಾನಿಸಿಲ್ಲ ಎಂಬುದು ಸಾರ್ವಜನಿಕರ ಮತ್ತು ರಾಜಕೀಯ ರಂಗದಲ್ಲಿ ಇರುವವರ ಕಳವಳದ ಸಾರಾಂಶ. ಇದರ ಬಿಸಿ ಕರ್ನಾಟಕದ ಮುಖ್ಯಮಂತ್ರಿ- ಮಾಜಿ ಮುಖ್ಯಮಂತ್ರಿಗಳಿಗೂ ತಟ್ಟಿದೆ; ಅವರು ಸಿಡಿಮಿಡಿಗೊಂಡಿದ್ದಾರೆ ಎಂಬುದು ಇದಕ್ಕೆ ಸಾಕ್ಷಿ. ಕಾಫಿ ತಿಂಡಿ ವಿತರಿಸಬಾರದು, ತಂಪು ನೀರು ಕೊಡಬಾರದು ಎಂಬಷ್ಟರ ಮಟ್ಟಿಗೂ ಅಧಿಕಾರಿಗಳು ತಮ್ಮ ಅಧಿಕಾರವನ್ನು ತೋರ್ಪಡಿಸುತ್ತಿದ್ದಾರೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅನುಮತಿಯನ್ನು ಪಡೆದಿದ್ದರೂ ಅಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಒಂದೆಡೆ ಮತದಾರರು ಸಕ್ರಿಯವಾಗಿ ಒಳಗೊಳ್ಳುವ ಆಶಯದ ಸ್ವೀಪ್ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದರೆ, ಇನ್ನೊಂದೆಡೆ ಚುನಾವಣಾ ಪ್ರಕ್ರಿಯೆ ಒಂದು ರೀತಿಯಲ್ಲಿ ಯುದ್ಧದ ಅಥವಾ ತುರ್ತು ಪರಿಸ್ಥಿತಿಯ ಅಥವಾ ಕರ್ಫ್ಯೂ ನೆನಪಿಸುವ ರೀತಿಯಲ್ಲಿದೆ ಎಂಬ ಆಕ್ಷೇಪಗಳು ಮಾಧ್ಯಮ ಕಚೇರಿಗೆ ಬರುತ್ತಿವೆ.
ಬಿಜೆಪಿಯ ರಾಷ್ಟ್ರೀಯ ಪ್ರಮುಖರ ನಿಯೋಗ ಈಗಾಗಲೇ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಿದೆ. ‘ಪ್ರಚಾರ ಕಾರ್ಯಕ್ಕೆ ಅಧಿಕಾರಿಗಳಿಂದ ಉಂಟಾಗಿರುವ ಅಡ್ಡಿ ಆತಂಕಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದೆ.
ದ. ಕನ್ನಡ- ಉಡುಪಿ ಜಿಲ್ಲೆಗಳಲ್ಲಿಯೂ ಅಸಮಾಧಾನದ ಸ್ವರ ಕೇಳಿಸುತ್ತಿದೆ. ಕಾನೂನು ಪಾಲನೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ ಇದು. ಇಲ್ಲಿ ಕೂಡ ಈ ಸಮಸ್ಯೆ ಕಾಡಿದೆ ಎಂದರೆ… ಕಾನೂನು ಪಾಲನೆಯಾಗಬೇಕೇ ಹೊರತು ಉರುಳಾಗಬಾರದು. ಇಲ್ಲಿನ ದೇವಾಲಯಗಳ ಸಹಿತ ಧಾರ್ಮಿಕ ಕೇಂದ್ರಗಳಲ್ಲಿಯೂ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ರಾಜಕೀಯ ಉದ್ದೇಶದ ಸಭೆಗಳನ್ನು ಇಲ್ಲಿ ಯಾರಾದರೂ ನಡೆಸಬಹುದು ಎಂಬುದು ಅವರ ಶಂಕೆ. ಈ ಹಿಂದಿನ ಯಾವ ಚುನಾವಣೆಯಲ್ಲೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ.
ಮನೋಹರ ಪ್ರಸಾದ್