ಬೆಂಗಳೂರು: ಗುತ್ತಿಗೆ ಪಡೆದ ಪ್ರದೇಶ ಬಿಟ್ಟು, ಪಕ್ಕದಲ್ಲಿ ನಡೆಸುತ್ತಿರುವ ಕಲ್ಲು ಕ್ವಾರಿಯನ್ನು ಸಕ್ರಮ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಶುಕ್ರವಾರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ಯಂತ್ರ ಬಳಸದೆ ಕಲ್ಲು ಕ್ವಾರಿ ಮಾಡುವವರು ತಮಗೆ ಗುತ್ತಿಗೆ ಮಂಜೂರಾದ ಪ್ರದೇಶವನ್ನು ಬಿಟ್ಟು ಆಕಸ್ಮಿಕವಾಗಿ ಗೊತ್ತಿಲ್ಲದೆ ಪಕ್ಕದಲ್ಲಿ ಕ್ವಾರಿ ನಡೆಸಿದರೆ ಅಂಥ ಪ್ರದೇಶವನ್ನು ಮರು ಹೊಂದಾಣಿಕೆ ಮಾಡಲಾಗುವುದು ಎಂದರು.
ಗಣಿ ಅಧಿಕಾರಿಗಳಿಗೆ ಸೂಕ್ತ ಅನಿಸಿದರೆ ಮಂಜೂರಾದ ಮೂಲ ಗುತ್ತಿಗೆ ಪ್ರದೇಶವನ್ನು ಮರು ಹೊಂದಾಣಿಕೆ ಮಾಡಿಕೊಳ್ಳಬಹುದು. ಹೀಗಾಗಿ ಮಂಜೂರಾದ ಮೂಲ ಗುತ್ತಿಗೆ ಪ್ರದೇಶ ಬಿಟ್ಟು ಕಲ್ಲುಕ್ವಾರಿ ನಡೆಸುವ ಪ್ರದೇಶವನ್ನು ಸಕ್ರಮಗೊಳಿಸಲಾಗುತ್ತದೆ. ಕಲ್ಲು ಗಣಿಗಾರಿಕೆ ಮಾಡದೇ ಉಳಿದ ಮೂಲ ಗುತ್ತಿಗೆ ಪ್ರದೇಶವನ್ನು ವಾಪಸ್ ಪಡೆಯಲಾಗುವುದು ಎಂದರು.
ಕಲ್ಲುಕ್ವಾರಿ ಗುತ್ತಿಗೆ ಸ್ಥಳದ ವ್ಯತ್ಯಾಸದ ಬಗ್ಗೆ ಕೆಲ ವರ್ಷಗಳಿಂದ ವಿವಾದ ಸೃಷ್ಟಿಯಾಗಿತ್ತು. ಗ್ರಾಮೀಣ ಭಾಗದ ಶಾಸಕರು ಈ ಬಗ್ಗೆ ಪಕ್ಷಾತೀತವಾಗಿ ಬೇಡಿಕೆ ಸಲ್ಲಿಸಿದ್ದರು. ಕೆಲ ಗುತ್ತಿಗೆದಾರರು ಹೈಕೋರ್ಟ್‌ಗೂ ಮನವಿ ಸಲ್ಲಿಸಿದ್ದರು. ಪಟ್ಟಾ ಜಾಗ ಹಾಗೂ ಗುತ್ತಿಗೆ ಜಾಗದಲ್ಲಿ ನಿಗದಿತ ಸ್ಥಳ ಬಿಟ್ಟು ಬೇರೆಡೆ ಗಣಿಗಾರಿಕೆ ನಡೆಸುತ್ತಾರೆ ಎಂಬ ಆರೋಪದ ಜತೆಗೆ ಯಾಂತ್ರೀಕೃತ ಗಣಿಗಾರಿಕೆಯೂ ನಡೆಯುತ್ತಿತ್ತು.
Related Articles
54.6 ಕೋಟಿ ಷೇರು ಬಂಡವಾಳ ಎತ್ತುವಳಿ
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ 54.6 ಕೋಟಿ ಷೇರು ಬಂಡವಾಳ ಎತ್ತುವಳಿಗೆ ಅವಕಾಶ ಕಲ್ಪಿಸಲಾಗಿದೆ. ನಿಗಮದ ಎನ್‌ಪಿಎ ಯಾದ ತೀರುವಳಿಗಳಿಗೆ ಒಂದಾವರ್ತಿ (ಒನ್ ಟೈಂ ಸೆಟ್ಲಮೆಂಟ್) ಇತ್ಯರ್ಥಕ್ಕೆ 2003-2023ವರೆಗೆ ಅನ್ವಯವಾಗುವಂತೆ ಅವಕಾಶ ಕಲ್ಪಿಸಲಾಗಿದೆ. ಈಗ ನಿಗಮದಲ್ಲಿ ಅಸಲು 127 ಕೋಟಿ ರೂ. ಬಾಕಿ ಇದ್ದರೆ, 217.65 ಕೋಟಿ ಬಡ್ಡಿ ಮೊತ್ತ ಬಾಕಿ ಇದೆ. ಒಟ್ಟು 345 ಕೋಟಿ ರೂ. ಬಾಕಿ ಇದೆ. ರಾಜ್ಯ ಸರಕಾರ ಪ್ರಸ್ತುತ ಬಳಸುತ್ತಿರುವ ಎಚ್‌ಆರ್‌ಎಂಎಸ್ ತಂತ್ರಾಂಶ ಪರಿಷ್ಕರಣೆಗೆ ನಿರ್ಧರಿಸಿದ್ದು, 40 ಕೋಟಿ ರೂ. ಅನುದಾನಕ್ಕೆ ಸಂಪುಟ ಸಮ್ಮತಿಸಿದೆ.
ರಾಜ್ಯಾದ್ಯಂತ 100 ಅಂಬೇಡ್ಕರ್ ಹಾಸ್ಟೆಲ್ ನಿರ್ಮಾಣಕ್ಕೆ 600 ಕೋಟಿ ರೂ. ನೀಡಲಿದೆ.
114 ನಗರ
ಕ್ಲಿನಿಕ್ ಮೇಲ್ದರ್ಜೆಗೆ
ಪಿಎಂ ಅಭೀಮ್ ಯೋಜನೆಯಡಿ 114 ನಗರ ಕ್ಲಿನಿಕ್‌ಗೆ ಅವಕಾಶ ಕೊಟ್ಟಿದ್ದು, ಅವು ನಮ್ಮ ಕ್ಲಿನಿಕ್ ಆಗಿ ರೂಪಾಂತರವಾಗಲಿವೆ. ಆರೋಗ್ಯ ಉಪಕೇಂದ್ರ (ಎಎನ್‌ಎಂ ಸೆಂಟರ್)ಕ್ಕೆ ಹೆಚ್ಚು ಶಕ್ತಿ ನೀಡಲು ಸಿಬಂದಿ ನಿಯೋಜನೆಗೆ ಸಮ್ಮತಿಸಲಾಗಿದೆ. ಒಟ್ಟು 847 ಕೇಂದ್ರಗಳ ಮೇಲ್ದರ್ಜೆಗೇರಿಸಲು ಒಪ್ಪಿಗೆ ಕೊಡಲಾ ಗಿದ್ದು, 71.56 ಕೋಟಿ ರೂ. ಮೊತ್ತಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು ಸಚಿವರು.
ಫೆ.10ರಿಂದ
ಜಂಟಿ ಅಧಿವೇಶನ
ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಫೆ.10ರಿಂದ ನಡೆಯಲಿದೆ. ಫೆ. 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುವರು. ಫೆ.10ರಂದು ಅಧಿವೇಶನ ಪ್ರಾರಂಭಗೊಳ್ಳಲಿದ್ದು, ಉಭಯ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವರು. ಫೆ.10ರಿಂದ 17ರ ವರೆಗೆ ರಾಜ್ಯಪಾಲರ ಭಾಷಣದ ಕುರಿತು ಚರ್ಚೆ ನಡೆಯಲಿದೆ. ಆದರೆ ಬಜೆಟ್ ಅಧಿವೇಶನ ಎಷ್ಟು ದಿನ ನಡೆಸಬೇಕೆಂಬ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆ (ಬಿಎಸಿ)ಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಸಚಿವರು ತಿಳಿಸಿದರು.