Advertisement

ಸಚಿವಾಕಾಂಕ್ಷಿಗಳ ಆಸೆಗೆ ಕಾನೂನಿನ ಕುಣಿಕೆ?

10:56 PM Jan 26, 2020 | Team Udayavani |

ಬೆಂಗಳೂರು: ಸೋತವರಿಗೂ ಸಚಿವ ಸ್ಥಾನ ನೀಡಲು ಕಾನೂನಿನ ತೊಡಕಿರುವುದರಿಂದ ಅವರಿಗೂ ಸಚಿವ ಸ್ಥಾನ ನೀಡಬೇಕೆಂದರೆ ವಿಳಂಬವಾಗುತ್ತದೆ ಎನ್ನುವ ಸಂದೇಶವನ್ನು ಬಿಜೆಪಿ ವರಿಷ್ಠರು ಗೆದ್ದಿರುವ ವಲಸೆ ಶಾಸಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ವಲಸಿಗರ ಒಗ್ಗಟ್ಟಿನಲ್ಲಿ ಬಿರುಕು ಮೂಡುವಂತಾಗಿದೆ ಎನ್ನಲಾಗಿದೆ.

Advertisement

ವಲಸಿಗರಲ್ಲಿ ಸೋತವರಿಗೂ ಮಂತ್ರಿ ಸ್ಥಾನ ಕೊಡಬೇಕೆಂದು ಪಟ್ಟು ಹಿಡಿದಿರುವ ನೂತನ ಶಾಸಕರಿಗೆ, ಸೋತವರಿಗೆ ಮಂತ್ರಿ ಸ್ಥಾನ ನೀಡಿದರೆ ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಎಲ್ಲರನ್ನೂ ಒಟ್ಟಿಗೆ ಸಚಿವರನ್ನಾಗಿ ಮಾಡಲು ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವವರೆಗೂ ಸಂಪುಟ ವಿಸ್ತರಣೆ ಕಷ್ಟ ಎಂದು ಹೇಳಿದ್ದು, ಅವರಿಗೆ ಸದ್ಯಕ್ಕೆ ಸಂಪುಟದಲ್ಲಿ ಸ್ಥಾನ ನೀಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ, ವಲಸಿಗರಲ್ಲಿ ಗೆಲುವು ಸಾಧಿಸಿರುವ ಶಾಸಕರಿಗೆ ಸ್ಪಷ್ಟಪಡಿಸಿದ್ದಾರೆಂದು ತಿಳಿದು ಬಂದಿದೆ.

ಅದೇ ಕಾರಣಕ್ಕೆ ಇದುವರೆಗೂ ಸೋತವರಿಗೂ ಸಂಪುಟದಲ್ಲಿ ಈಗಲೇ ಮಂತ್ರಿ ಸ್ಥಾನ ನೀಡಬೇಕೆಂದು ಒಗ್ಗಟ್ಟಿನ ಮಂತ್ರ ಜಪಿಸಿದ್ದ ಶಾಸಕರು ಈಗ ರಾಗ ಬದಲಿಸಿದ್ದು, ಗೆದ್ದವರನ್ನಾದರೂ ಸಚಿವರನ್ನಾಗಿ ಮಾಡುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ತಮ್ಮ ತಂಡದಲ್ಲಿಯೇ ಅಪಸ್ವರ ಎತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದುವರಿದ ಗೊಂದಲ: ಮುಖ್ಯಮಂತ್ರಿ ಯಡಿಯೂರಪ್ಪ ದಾವೋಸ್‌ನಿಂದ ಆಗಮಿಸಿದ ತಕ್ಷಣ ಸಂಪುಟ ವಿಸ್ತರಣೆಯಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಸಚಿವಾಕಾಂಕ್ಷಿಗಳಿಗೆ ಇನ್ನೂ ಸ್ಪಷ್ಟತೆ ಸಿಗದೇ ಗೊಂದಲಕ್ಕೊಳಗಾಗುವಂತೆ ಮಾಡಿದೆ.  ಜ.29 ರಂದು ಸಂಪುಟ ವಿಸ್ತರಣೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಚಿವಾಕಾಂಕ್ಷಿಗಳಿಗೆ ತಕ್ಷಣ ವಿಸ್ತರಣೆಯ ಲಕ್ಷಣಗಳು ಕಾಣಿಸುತ್ತಿಲ್ಲ ಎಂಬ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.

ಸಚಿವಾಕಾಂಕ್ಷಿಗಳ ಲೆಕ್ಕಾಚಾರದ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಜ.27 ಅಥವಾ 28 ರಂದು ದೆಹಲಿಗೆ ತೆರಳಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ಶುಭಾಶಯ ಕೋರಿ ಸಂಪುಟ ವಿಸ್ತರಣೆಗೆ ಅಧಿಕೃತ ಒಪ್ಪಿಗೆ ಪಡೆದುಕೊಂಡು ಬರುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರು. ಆದರೆ, ಮುಖ್ಯಮಂತ್ರಿ ಸದ್ಯಕ್ಕೆ ದೆಹಲಿ ಪ್ರವಾಸ ಕೈಗೊಳ್ಳದಿರುವುದು ಸಚಿವಾಕಾಂಕ್ಷಿಗಳಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.

Advertisement

ಆದರೆ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರೇ ಬೆಂಗಳೂರಿಗೆ ಆಗಮಿಸಿ ಸಂಪುಟ ವಿಸ್ತರಣೆಯ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿರುವುದರಿಂದ ಮುಖ್ಯಮಂತ್ರಿ ಸದ್ಯಕ್ಕೆ ದೆಹಲಿಗೆ ತೆರಳದೇ ಸಂಪುಟ ವಿಸ್ತರಣೆಗೆ ಕ್ರಮ ಕೈಗೊಳ್ಳುತ್ತಾರೆ ಎಂಬುದು ಬಿಜೆಪಿಯ ಒಂದು ವರ್ಗದ ಮೂಲಗಳ ಮಾಹಿತಿ. ಆದರೆ, ಸಂಪುಟ ವಿಸ್ತರಣೆಯಂತಹ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಅಧಿಕೃತ ಒಪ್ಪಿಗೆ ಪಡೆಯದೇ ಹೋದರೆ,

ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆಯ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ತಪ್ಪು ಸಂದೇಶ ರವಾನೆ ಯಾಗುತ್ತದೆ ಎನ್ನುವ ಕಾರಣಕ್ಕೆ ಅವರನ್ನು ಭೇಟಿ ಮಾಡಿದ ನಂತರವೇ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಹೀಗಾಗಿ ಈ ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಮಾಡುವ ಅನುಮಾನವಿದ್ದು, ಫೆಬ್ರವರಿ 5ರ ನಂತರ ವಿಸ್ತರಿಸುವ ಸಾಧ್ಯತೆ ಇದೆ ಎಂಬುದು ಬಿಜೆಪಿಯ ಇನ್ನೊಂದು ಮೂಲಗಳ ಮಾಹಿತಿ.

ಮುನಿರತ್ನಗೆ ಆರ್‌ಎಸ್‌ಎಸ್‌ ಶಾಕ್‌: ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಮ್ಮ ವಿರುದ್ಧ ತುಳಸಿ ಮುನಿರಾಜು ದಾಖಲಿಸಿರುವ ಪ್ರಕರಣವನ್ನು ವಾಪಸ್‌ ಪಡೆಯಲು ಸೂಚಿಸುವಂತೆ ಗುರುವಾರ್‌ ಆರ್‌ಎಸ್‌ಎಸ್‌ ನಾಯಕರೊಬ್ಬರನ್ನು ಭೇಟಿ ಮಾಡಿ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ಅವರು ಬಿಜೆಪಿಗೆ ನೀವು ಬಂದಿರುವುದಕ್ಕೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ.

ಈ ವಿಷಯದಲ್ಲಿ ಸಂಘ ಯಾವುದೇ ರೀತಿಯ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮುನಿರತ್ನ ಶನಿವಾರ ಮತ್ತೆ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ಪ್ರಕರಣ ವಾಪಸ್‌ ತೆಗೆದುಕೊಳ್ಳಲು ತುಳಸಿ ಮುನಿರಾಜುಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಯಡಿಯೂರಪ್ಪ ಹೇಳಿರು ವುದು ಪಕ್ಷ ದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಿದಂತಾಗಿದೆ. ನಂಬಿಸಿ ದ್ರೋಹ ಮಾಡಿದವರಿಗೆ ಇದೇ ಶಿಕ್ಷೆ.
-ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next