ತೆಲಸಂಗ: ಹೆಣ್ಣುಮಕ್ಕಳಿಗಾಗಿ ಸರಕಾರಗಳು ಏನೆಲ್ಲ ಸೌಲಭ್ಯ ಒದಗಿಸಿದ್ದರೂ, ಸಾಕ್ಷರತೆ ಹೆಚ್ಚಿದ್ದರೂ ಬಾಲ್ಯ ವಿವಾಹ ಮಾತ್ರ ನಿಲ್ಲುತ್ತಿಲ್ಲ ಎಂದು ಅಥಣಿ ಜೆ.ಎಮ್. ಎಫ್.ಸಿ. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ ನಾಗಲಾಪೂರ ವಿಷಾದ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಗ್ರಾಪಂ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಯೋಜನೆ ಪ್ರಯುಕ್ತ ನಡೆದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಹಣ ಮಾಡುವ ಹುಚ್ಚು ಮನುಷ್ಯನನ್ನು ಕ್ರೂರಿಯನ್ನಾಗಿಸುತ್ತಿದೆ. ಕಾನೂನುಗಳಿರುವುದು ನಮ್ಮ ಜೀವನ ಸುಖಮಯವಾಗಿರಲಿ ಎನ್ನುವ ಕಾರಣಕ್ಕೆ, ತೊಂದರೆ ಕೊಡಲಿಕ್ಕೆ ಅಲ್ಲ.
ಮರ್ಯಾದೆಗಂಜಿ ದೂರು ಸಲ್ಲಿಸದಿರುವುದಕ್ಕೆ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಅಪರಾಧ ಎಸಗಿದವರು ಮರ್ಯಾದೆಗೆ ಅಂಜಬೇಕೇ ಹೊರತು ಅನ್ಯಾಯಕ್ಕೊಳಗಾದವರಲ್ಲ. ನಿಮ್ಮ ಮನೆಯ ಸುತ್ತಮುತ್ತ ಅನಾವಶ್ಯಕವಾಗಿ ಓಡಾಡುವವರನ್ನು ಪ್ರಶ್ನೆ ಮಾಡಿ. ಇದರಿಂದ ಮುಂದಾಗುವ ಅನಾಹುತ ತಪ್ಪುತ್ತವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರ ಆರೋಗ್ಯದ ಕಡೆ ಗಮನಕೊಡಿ. ಮೊಬೈಲ್ ಸದ್ಬಳಕೆಯ ಸಂಸ್ಕಾರ ಕೊಡಿ. ದೈನಂದಿನ ಬದುಕಿಗೆ ಅಗತ್ಯವಿರುವ ಕಾನೂನುಗಳನ್ನು ತಿಳಿದುಕೊಳ್ಳಿ. ಸಮಾಜದಲ್ಲಿನ ಆಗುಹೋಗುಗಳಿಗೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಇರಬೇಡಿ. ಇದರಿಂದ ಮುಂದೊಂದು ದಿನ ನಿಮಗೂ ಸಂಕಟ ತಪ್ಪಿದ್ದಲ್ಲ. ಕೊರೊನಾ ಸಮಯದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿರುವುದು ವಿಷಾದದ ಸಂಗತಿ. ಮೌಡ್ಯ ಹಾಗೂ ಅಜ್ಞಾನವನ್ನು ಧೈರ್ಯದಿಂದ ತಡೆದು ಸಮಾಜದಲ್ಲಿ ಸಾಮರಸ್ಯ ತನ್ನಿರಿ ಎಂದರು.
ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಟಿ.ಕಾಂಬಳೆ, ನ್ಯಾಯವಾದಿಗಳಾದ ಎಲ್.ಡಿ.ಹಳಿಂಗಳಿ, ಪಿ.ಬಿ.ಮೋರೆ, ಸಿ.ಎಸ್.ಉಂಡೋಡಿ, ಗೌರೀಶ ಹಿರೇಮಠ, ಎಸ್.ಎಸ್.ಪಾಟೀಲ, ಪಿಡಿಒ ಬೀರಪ್ಪ ಕಡಗಂಚಿ, ಸದಸ್ಯರು ಪಾಲ್ಗೊಂಡಿದ್ದರು. ಶಿಕ್ಷಕ
ಗಪೂರ ಮುಲ್ಲಾ ಕಾರ್ಯಕ್ರಮ ನಡೆಸಿಕೊಟ್ಟರು.