Advertisement
ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಈ ಆದೇಶದಿಂದ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಹಾದಿ ಸುಗಮವಾದಂತಾಗಿದೆ. ಧಾರವಾಡ ಮತ್ತು ಕಲಬುರಗಿ ನ್ಯಾಯಪೀಠಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು ಶೀಘ್ರ ಇತ್ಯರ್ಥಗೊಂಡರೆ, ಬಾಕಿ ಉಳಿದಿರುವ 39 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
Related Articles
Advertisement
ಅದೇ ರೀತಿ, 13 ನಗರ ಸ್ಥಳೀಯ ಸಂಸ್ಥೆಗಳಿಗೆ 14 ದಿನಗಳಲ್ಲಿ ನಿಗದಿತ ಮಾರ್ಗಸೂಚಿ ಹಾಗೂ ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯಗಳ ಪ್ರಕಾರ ಮೀಸಲು ಪ್ರಕ್ರಿಯೆಯನ್ನು “ರೀಡು” (ಮರು ನಿಗದಿ) ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. 2019ರ ಜ.14ರಂದು ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿದ್ದು ತಪ್ಪು ಎಂದು ವಿಭಾಗೀಯ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಚುನಾವಣಾ ತಕರಾರು ಏನಿತ್ತು?: ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಆಕ್ಷೇಪಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಮಂಗಳೂರಿನ ರವೀಂದ್ರ ನಾಯಕ್ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ, ಇನ್ನುಳಿದ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಕುರಿತು 25ಕ್ಕೂ ಹೆಚ್ಚು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ.ಸುನೀಲ್‌ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಾದ ಪುರಸ್ಕರಿಸಿ, ರಾಜ್ಯ ಸರ್ಕಾರದ ಅಧಿಸೂಚನೆ ರದ್ದುಪಡಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಚುನಾವಣೆ ಹಾದಿ ಸುಗಮಗೊಂಡ ಸ್ಥಳೀಯ ಸಂಸ್ಥೆಗಳು: ಮಂಗಳೂರು ಮಹಾನಗರ ಪಾಲಿಕೆ, ಚಿಕ್ಕಮಗಳೂರು ನಗರಸಭೆ, ಚನ್ನರಾಯಪಟ್ಟಣ ಪುರಸಭೆ, ರಾಮನಗರ ನಗರಸಭೆ, ದೊಡ್ಡಬಳ್ಳಾಪುರ ನಗರಸಭೆ, ಗುಡಿಬಂಡೆ ಪಟ್ಟಣ ಪಂಚಾಯಿತಿ, ವಿಜಯಪುರ ಪುರಸಭೆ, ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, ಶಿರಾ ನಗರಸಭೆ, ತರೀಕೆರೆ ಪುರಸಭೆ, ಬೇಲೂರು ಪುರಸಭೆ, ಮಡಿಕೇರಿ ನಗರಸಭೆ.
ಹೈಕೋರ್ಟ್ ತೀರ್ಪಿನಿಂದ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಚುನಾವಣೆಗೆ ಎದುರಾಗಿದ್ದ ಕಾನೂನು ತೊಡಕು ದೂರವಾಗಿದೆ. ಈಗ ಧಾರವಾಡ ಮತ್ತು ಕಲಬುರಗಿ ನ್ಯಾಯಪೀಠಗಳಲ್ಲಿ ಬಾಕಿ ಇರುವ ಪ್ರಕರಣಗಳು ಇತ್ಯರ್ಥಗೊಂಡರೆ ಬಾಕಿ ಇರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಾರಿ ಸುಗಮವಾಗಲಿದೆ.-ಪಿ.ಎನ್ ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯುಕ್ತ