Advertisement

ಪತ್ರಕರ್ತರಿಗೆ ಕಾನೂನು ಅರಿವು ಅಗತ್ಯ : ನ್ಯಾಯಾಧೀಶರಾದ ಬಿ.ಎಸ್. ಭಾರತಿ

11:42 AM Jul 16, 2023 | Team Udayavani |

ಚಾಮರಾಜನಗರ:  ಪತ್ರಕರ್ತರಿಗೆ ಕಾನೂನಿನ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಎಸ್. ಭಾರತಿ ಹೇಳಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಆವರಣದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಪತ್ರಕರ್ತರಿಗೆ ಕಾನೂನುಗಳ ಅರಿವು ಇರುತ್ತದೆ. ಕಾನೂನಿನ ಬಗ್ಗೆ ಎಷ್ಟೇ ತಿಳಿವಳಿಕೆ ಇದ್ದರೂ ಹೊಸ ಹೊಸ ಕಾನೂನುಗಳು ಬರುತ್ತವೆ. ನ್ಯಾಯಾಧೀಶರಾಗಿದ್ದರೂ, ನಿವೃತ್ತರಾಗುವವರೆಗೂ ನಾನು ಕಾನೂನುಗಳ ಬಗ್ಗೆ ಅಧ್ಯಯನ ಮಾಡುತ್ತಲೇ ಇರುತ್ತೇವೆ. ಹೀಗಿರುವಾಗ ಪತ್ರಕರ್ತರೂ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅವುಗಳ ಬಗ್ಗೆ ಅರಿವಿದ್ದರೆ ಸುದ್ದಿಗಳನ್ನು ಮಾಡುವಾಗ ಎಚ್ಚರಿಕೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಪತ್ರಕರ್ತರು ಇಂತಹ ಕಾರ್ಯಾಗಾರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್‌ಸ್, ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶೆ ನಿಶಾರಾಣಿ ಮಾತನಾಡಿ, ಪೋಕ್ಸೋ ಕಾಯ್ದೆ ಸಂಬಂಧ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾದಾಗ ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಬಾರದು. ಶಿಕ್ಷೆ, ಪ್ರಮಾಣ ಬರೆದರೆ ಅನುಕೂಲ. ಶಿಕ್ಷೆ ಸಂಬಂಧ ಜನರಿಗೆ ಅರಿವು ಮೂಡಿಸುವ ವಿಚಾರ ಬರೆದರೆ ಉತ್ತಮ. ಬಾಲ್ಯವಿವಾಹ ನಿಷೇಧ ಕಾಯ್ದೆ ಸಂಬಂಧ ಸುದ್ದಿ ಹೆಚ್ಚು ಬಂದಲ್ಲಿ ಜನರಲ್ಲಿ ಜಾಗೃತಿ ಉಂಟಾಗಲು ಸಹಾಯಕವಾಗಲಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಶ್ರೀಧರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಪ್ರಮುಖ ಅಂಗ ಎನಿಸಿಕೊಂಡಿರುವ ಪತ್ರಿಕಾ ರಂಗ ಸಮಾಜದ ಧ್ವನಿಯಾಗಿದೆ. ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಆದರೆ ಮತ್ತೊಬ್ಬರ ಸ್ವಾತಂತ್ರ್ಯಹರಣವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಕಾಯ್ದೆಗಳ ಬಗ್ಗೆ ಹೆಚ್ಚು ಅರಿವು ಹೊಂದಬೇಕಿದೆ ಎಂದು ತಿಳಿಸಿದರು.

Advertisement

ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಇಂದು ಯಾರಾದರೂ ಪತ್ರಕರ್ತರಾಗಬಹುದು ಎಂಬ ವಾತಾವರಣ ಇದೆ. ಪತ್ರಕರ್ತರಿಗೆ ನಿರ್ದಿಷ್ಟ ವಿದ್ಯಾರ್ಹತೆ, ಸಾಮಾಜಿಕ ಕಳಕಳಿ, ನಾಗರಿಕ ಸಮಸ್ಯೆಗಳ ಅರಿವು ಇರಬೇಕು. ನೈಜ ಪತ್ರಕರ್ತರಿಗಿಂತ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಇಂಥ ನಕಲಿ ಪತ್ರಕರ್ತರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.

ಪತ್ರಕರ್ತರು ಎಂದು ಹೇಳಿಕೊಂಡು ಅಧಿಕಾರಿಗಳನ್ನು ಹೆದರಿಸಿ, ಬ್ಲಾಕ್‌ಮೇಲ್ ಮಾಡುವವರಿದ್ದಾರೆ. ನಕಲಿ ಪತ್ರಕರ್ತರಿಗೆ ಹೆದರದೇ ಅವರನ್ನು ಪ್ರಶ್ನಿಸುವ ಮನೋಭಾವವನ್ನು ಜನರು ಬೆಳೆಸಿಕೊಳ್ಳಬೇಕು. ಅಂಥವರಿಗೆ ಕಡಿವಾಣ ಹಾಕಬೇಕು. ನಕಲಿ ಪತ್ರಕರ್ತರಿಂದ ನೈಜ ಪತ್ರಕರ್ತರಿಗೂ ಕೆಟ್ಟ ಹೆಸರು ಬರುತ್ತದೆ ಎಂದರು.

ಹಿರಿಯ ವಕೀಲ ರವಿ ಅವರು ಪತ್ರಿಕಾ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ, ವಕೀಲ ಮಹಾಲಿಂಗಗಿರ್ಗಿ, ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ಮುಖ್ಯ ಉಪನ್ಯಾಸ ನೀಡಿದ ಪತ್ರಕರ್ತ ಕೆ. ನರಸಿಂಹಮೂರ್ತಿ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳು, ಡಿಜಿಟಲ್ ಮಾಧ್ಯಮ ಬಂದ ಬಳಿಕ ಸುದ್ದಿಗಳು ಕ್ಷಣಾರ್ಧದಲ್ಲಿ ಪ್ರಸಾರವಾಗುತ್ತವೆ. ಮಾಧ್ಯಮಗಳಲ್ಲಿ ಬರುವ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ವೇಗವಾಗಿ ಹರಡುತ್ತಿವೆ. ಅದರಲ್ಲಿ ಸತ್ಯವೆಷ್ಟು, ಸುಳ್ಳೆಷ್ಟು ಗೊತ್ತಿರುವುದಿಲ್ಲ. ಆದರೆ ಸತ್ಯವಾದ, ನೈಜವಾದ ವರದಿಯನ್ನು ಪ್ರಕಟಿಸುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ ಎಂದರು.

ಇಂದು ಸುದ್ದಿಯ ಆಯುಷ್ಯ ಕಡಿಮೆ. ಇಂದಿನ ಸುದ್ದಿ ನಾಳೆಗೆ ರದ್ದಿ ಎಂಬ ಮಾತು ಈಗ ಅನ್ವಯವಾಗುವುದಿಲ್ಲ. ಇಂದು ನೈಜ ಸುದ್ದಿ ಕೊಡುವುದೇ ಸವಾಲಿನ ಕೆಲಸವಾಗಿದೆ. ಸರಿಯಾದ ಹಾಗೂ ನೈಜ ಸುದ್ದಿಗಳನ್ನು ಕೊಡುವುದು ಪತ್ರಕರ್ತರ ಜವಾಬ್ದಾರಿ. ಸತ್ಯಾಂಶವನ್ನು ಪರಿಶೀಲಿಸದೇ ವರದಿ ಮಾಡಬಾರದು. ಮಾಹಿತಿಯನ್ನು ತಿರುಚಬಾರದು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next