Advertisement

ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಅರಿವು ಅತ್ಯಗತ್ಯ

06:14 PM Oct 06, 2020 | Suhan S |

ಶಿವಮೊಗ್ಗ: ದೇಶದ ಯಾವುದೇ ಪ್ರಜೆಯೂ ನ್ಯಾಯದಾನದಿಂದ ವಂಚಿತನಾಗದಂತೆ ಹಾಗೂತಾರತಮ್ಯಕ್ಕೆ ಒಳಗಾಗದಂತೆ ನಮ್ಮ ಸಂವಿಧಾನ  ಕಾನೂನಿನ ಮುಂದೆ ಸಮಾನವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್‌ ಆರ್‌.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರು ಹೇಳಿದರು.

Advertisement

ಅವರು ಸೋಮವಾರ ಜಿಲ್ಲಾ ಪಂಚಾಯಿತಿಯ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ಅರೆಕಾಲಿಕ ಸ್ವಯಂ ಸೇವಕರಿಗಾಗಿ ಏರ್ಪಡಿಸಲಾಗಿದ್ದ ಅಭಿ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಿಳುವಳಿಕೆ ಕೊರತೆಯಿಂದ ಅನೇಕ ಸಂದರ್ಭಗಳಲ್ಲಿ ನ್ಯಾಯದಾನದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಕಾನೂನಿನ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಆಸಕ್ತ ಸ್ವಯಂಸೇವಕರಿಗಾಗಿ ಅಭಿಶಿಕ್ಷಣ ತರಬೇತಿಗಳನ್ನು ಆಯೋಜಿಸಿ ತರಬೇತಿ ನೀಡುತ್ತಿದೆ ಎಂದರು.

ತರಬೇತಿಯಲ್ಲಿ ಹಕ್ಕು ಮತ್ತು ಕರ್ತವ್ಯಗಳು, ಪ್ರಮುಖವಾಗಿರುವ ಕಾನೂನಿನ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು. ತರಬೇತಿ ಪಡೆದ ಸ್ವಯಂಸೇವಕರು ಸಾರ್ವಜನಿಕರಿಗೆ ಕಾನೂನು ಸೇವೆ ಮತ್ತು ಸಲಹೆಗಳನ್ನು ನೀಡಲು, ಜನತಾ ನ್ಯಾಯಾಲಯ ಶಿಬಿರಗಳ ಲಾಭಗಳು, ಕಾನೂನು ಅರಿವು ಮೂಡಿಸಿ ಮಾಹಿತಿ ಒದಗಿಸಲಿದ್ದಾರೆ ಎಂದರು.

ರಾಜೀ ಸಂಧಾನ, ಜನತಾ ನ್ಯಾಯಾಲಯಗಳ ಮೂಲಕ ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥ, ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ, ಪರ್ಯಾಯ ವ್ಯಾಜ್ಯ ಪರಿಹಾರದ ವ್ಯವಸ್ಥೆ ಹಾಗೂ ವ್ಯಾಜ್ಯಪೂರ್ವ ಸಮಸ್ಯೆಗಳ ಪರಿಹಾರ ಮುಂತಾದವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿನೀಡಲು ಸಹಾಯಕವಾಗಲಿದೆ. ಆದ್ದರಿಂದ ಪ್ರಶಿಕ್ಷಣಾರ್ಥಿಗಳು ಈ ಎಲ್ಲಾ ವಿಷಯಗಳ ಬಗೆಗೆ ವಿಸ್ತ್ರತ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ ಎಂದರು.

ಹಿರಿಯ ನ್ಯಾಯವಾದಿ ಡಿ.ಎನ್‌. ಹಾಲಸಿದ್ಧಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಾನೂನನ್ನು ಬೇರೆಯ ರೀತಿಯಲ್ಲಿಯೇ ಅರ್ಥೈಸಲಾಗುತ್ತಿದೆ. ಇದರಿಂದ ನ್ಯಾಯಾಂಗ ವ್ಯವಸ್ಥೆ ಮಹತ್ವ ಮತ್ತು ಅಸ್ತಿತ್ವಕ್ಕೆ ಧಕ್ಕೆ ಉಂಟಾಗಬಹುದಾದ ಆತಂಕವಿದೆ. ಹೀಗಾಗಿ ಕಾನೂನನ್ನು ಅದು ಇರುವಂತೆಯೇ ಪರಿಚಯಿಸಬೇಕಾದ ಅಗತ್ಯವಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್‌. ವೈಶಾಲಿ ಮಾತನಾಡಿ, ತರಬೇತಿ ಪಡೆದ ಅಭಿಶಿಕ್ಷಕರು ನ್ಯಾಯಾಲಯ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರಿಂದ ಜನರಲ್ಲಿ ಕಾನೂನು ಸಾಕ್ಷರತೆ ಹೆಚ್ಚಲಿದೆ. ಅದಕ್ಕಾಗಿ ಸ್ವಯಂ ಸೇವಕರು ಮೊದಲು ಕಾನೂನಿನ ಅರಿವು ಹೊಂದುವುದು ಅಗತ್ಯ ಎಂದರು.

ಈ ಸಂದರ್ಭದಲ್ಲಿ ಅಭಿಶಿಕ್ಷಕರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಹಾತ್ಮಗಾಂಧಿಧೀ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್‌ನ ನಿರ್ದೇಶಕ ಕೆ.ಸಿ. ಬಸವರಾಜು ತರಬೇತಿ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎಂ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next