Advertisement

ಆ್ಯಸಿಡ್‌ ಸಂತ್ರಸ್ತರಿಗೆ ಕಾನೂನು ಪ್ರಾಧಿಕಾರ ನೆರವು: ವೆಂಕಟೇಶ್‌

08:10 AM Aug 23, 2017 | Harsha Rao |

ಉಡುಪಿ: ಆ್ಯಸಿಡ್‌ ದಾಳಿಯಿಂದ ಸಂತ್ರಸ್ತರಾದವರು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಪಡೆಯಬಹುದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್‌ ನಾಯಕ್‌ ಟಿ. ತಿಳಿಸಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ಜಿಲ್ಲಾ ಪೊಲೀಸ್‌ ಇಲಾಖೆ ಮತ್ತು ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಪೊಲೀಸ್‌ ದೂರು ಪ್ರಾಧಿಕಾರ, ಕರ್ನಾಟಕ ಸಂತ್ರಸ್ತರ ಪರಿಹಾರ ಯೋಜನೆ-2011 ಮತ್ತು ಆ್ಯಸಿಡ್‌ ಸಂತ್ರಸ್ತರಿಗೆ ಸಿಗುವ ಕಾನೂನು ಸೇವೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸಂತ್ರಸ್ತರಿಗೆ ಸೌಲಭ್ಯ
ಆಸಿಡ್‌ ದಾಳಿಗೆ ಒಳಗಾಗಿ ಶೇ.80 ಕ್ಕೂ ಹೆಚ್ಚು ಹಾನಿಗೊಳಗಾದವರಿಗೆ 3 ಲಕ್ಷ, ಶೇ.40 ರಿಂದ 80 ರೊಳಗೆ ಹಾನಿಗೊಳಗಾದವರಿಗೆ ಹಾಗೂ ಶೇ. 40ಕ್ಕಿಂತ ಕಡಿಮೆ ಹಾನಿಗೊಳಗಾದವರಿಗೆ 1 ಲಕ್ಷ ಪರಿಹಾರ ಮತ್ತು ಅತ್ಯಾಚಾರಕ್ಕೆ ಒಳಗಾದರೆ ಅಪ್ರಾಪ್ತ ವಯಸ್ಕರು 3 ಲಕ್ಷ ಹಾಗೂ ವಯಸ್ಕರು 1.50 ಲಕ್ಷ ಪರಿಹಾರವನ್ನು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದು, ಈ ಕುರಿತು ಪ್ರಾಧಿಕಾರದಲ್ಲಿ ದೂರು ನೀಡುವಂತೆ ಹಾಗೂ ಸಂತ್ರಸ್ತರಿಗೆ ವೈದ್ಯಕೀಯ ವೆಚ್ಚ ಮತ್ತು ಪುರ್ನವಸತಿ ಸೌಲಭ್ಯ ಒದಗಿಸಲಾಗುವುದು ಎಂದರು.

ಸಂತ್ರಸ್ತರ ನೆರವಿಗೆ ಸರಕಾರ 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ ಎಂ. ಪಾಟೀಲ್‌ ಮಾತನಾಡಿ ಆ್ಯಸಿಡ್‌ ದಾಳಿಗೊಳಗಾದ ಸಂತ್ರಸ್ತರು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಅವರೊಂದಿಗೆ ಸಂವಿಧಾನ ಮತ್ತು ಕಾನೂನು ಇದೆ ಎನ್ನುವ ಆತ್ಮವಿಶ್ವಾಸ ಮೂಡಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅರಿವು ಹೊಂದಿರಬೇಕು. ಸಂತ್ರಸ್ತರಿಗೆ ನೆರವು ನೀಡಬೇಕು. ಆ್ಯಸಿಡ್‌ ದಾಳಿಕೋರರಿಗೆ ಅತ್ಯಂತ ಕಠಿನ ಶಿಕ್ಷೆ ಮತ್ತು ಸಂತ್ರಸ್ತರ ನೆರವಿಗೆ ಸರಕಾರ ಇದೆ ಎಂದರು.

ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರಕಾಶ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಲತಾ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಪ್ರಾಧ್ಯಾಪಕಿ ಸಿಸಿಲಿಯಾ ಡಿ’ಸೋಜಾ ಉಪಸ್ಥಿತರಿದ್ದರು. 

Advertisement

ಪೆಟ್ರೀಷಿಯಾ ಸ್ವಾಗತಿಸಿ, ವರ್ಷಾ ವಂದಿಸಿದರು. ನಿಖೀತಾ ಶೆಣೈ ನಿರೂಪಿಸಿದರು.  

ದೂರು ನೀಡಬಹುದು
ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸದ, ಅಕ್ರಮವಾಗಿ ಬಂಧನದಲ್ಲಿಟ್ಟ ಸಂದರ್ಭ ಹಾಗೂ ಠಾಣೆಯಲ್ಲಿ ಹಿಂಸೆ ನೀಡಿದರೆ ಈ ಕುರಿತು ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದು. ಅಲ್ಲದೆ ಕೋರ್ಟ್‌ ಹಲವು ಸಾರ್ವಜನಿಕ ಸ್ಥಳಗಳಲ್ಲಿ ದೂರು ಪೆಟ್ಟಿಗೆ ಇಟ್ಟಿದೆ ಎಂದು ಜಿಲ್ಲಾ  ನ್ಯಾಯಾಧೀಶರು ತಿಳಿಸಿದರು.  ವಿದ್ಯಾರ್ಥಿಗಳು ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವಿಧಾನ ಮತ್ತು ಅಲ್ಲಿ ಅಪರಾಧಿಗಳನ್ನು ನಡೆಸಿಕೊಳ್ಳುವ ರೀತಿಯ ಕುರಿತು ವೀಕ್ಷಿಸಿ. ಠಾಣೆಗಳಲ್ಲಿ ಯಾವುದೇ ಕಾನೂನು ಉಲ್ಲಂಘನೆ ಕಾರ್ಯ ನಡೆಯುತ್ತಿದ್ದರೆ ಕೂಡಲೇ ತಮಗೆ ವರದಿ ನೀಡುವಂತೆ ಎಸ್‌ಪಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next