ಯಾದಗಿರಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೂವರ ಬಂಧನ ವಿಚಾರವಾಗಿ ಯಾದಗಿರಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣವನ್ನು ಎಫ್ಎಸ್ಎಲ್ ವರದಿಗಾಗಿ ಕಳುಹಿಸಲಾಗಿತ್ತು, ಘೋಷಣೆ ಕೂಗಿದ್ದು ನಿಜವೆಂದು ಗೊತ್ತಾದ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಎಫ್ಎಸ್ಎಲ್ ವರದಿ ಬರುವುದಕ್ಕೂ ಮೊದಲೇ ಬಿಜೆಪಿಯವರು ನಕಲಿ ವರದಿ ಬಿಟ್ಟಿದ್ದರು. ನಮ್ಮ ವರದಿ ಒಂದು ದಿನ ತಡವಾಗಿರಬಹುದು ಆದರೆ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡುವಾಗ ಬಿಜೆಪಿ ಮುಖಂಡ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ, ಘೋಷಣೆ ಕೂಗುತ್ತಿದ್ದ ಹಾಗೆ ಹಿಂದೆಯಿಂದ ಒಬ್ಬ ಬಾಯಿ ಮುಚ್ಚಲು ಪ್ರಯತ್ನಿಸುತ್ತಾನೆ. ಅದರ ಬಗ್ಗೆ ಬಿಜೆಪಿಯವರು ಏನು ಮಾತನಾಡಲ್ಲ. ಅವನ ಬಗ್ಗೆ ಕೇಸ್ ಹಾಕಿಲ್ಲ, ಕ್ರಮ ಕೈಗೊಂಡಿಲ್ಲ ಆದರೆ ನಮ್ಮ ಸರ್ಕಾರ ಯಾರು ತಪ್ಪು ಮಾಡಿದ್ದಾರೆಂದು ನೋಡಿ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಕಡೆಯವರು ಕೂಗಿದರೆ ಏನು ತಪ್ಪಿಲ್ಲ, ಆದರೆ ಸರಕಾರದ ಪಡಸಾಲೆಯಲ್ಲಿ ಘೊಷಣೆ ಕೂಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಅದೇ ನಮ್ಮ ಪಕ್ಷದ ನಿಲುವು ಎಂದರು.
ವರದಿ ಬರುವ ಮುನ್ನವೇ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಗಳ ಪರ ಸಮರ್ಥನೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದ ವರದಿ ಬರುವ ತನಕ ಕಾಯಿರಿ ಎಂದು ಪ್ರಿಯಾಂಕ್ ಹೇಳಬೇಕಾಗಿತ್ತು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.