Advertisement

ತೃಕ್ಕರಿಪುರ ವಿ. ಕ್ಷೇತ್ರ: ಎಡರಂಗದ ಭದ್ರ ಕೋಟೆ; ಬದಲಾವಣೆಯ ಗಾಳಿ ಬೀಸೀತೇ?

10:05 PM Apr 20, 2019 | Team Udayavani |

ಕಾಸರಗೋಡು: ಹೇಳಿ ಕೇಳಿ ತೃಕ್ಕರಿಪುರ ವಿಧಾನಸಭಾ ಕ್ಷೇತ್ರ ಎಡರಂಗದ ಭದ್ರಕೋಟೆ. ಈ ವರೆಗೂ ಈ ಕ್ಷೇತ್ರದಲ್ಲಿ ಎಡರಂಗ ಯಾವ ರಾಜಕೀಯ ಪಕ್ಷದಿಂದಲೂ ನಿಕಟ ಸ್ಪರ್ಧೆಯನ್ನು ಎದುರಿಸಿಲ್ಲ. ಅಷ್ಟು ಭದ್ರವಾಗಿರುವ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಎಡರಂಗದ ಅಭ್ಯರ್ಥಿಗಳಿಗೆ ಹೊರತಾಗಿ ಇನ್ನೊಂದು ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ ಎಂಬ ವಿಶೇಷತೆಯೂ ಈ ಕ್ಷೇತ್ರಕ್ಕಿದೆ. ಇಲ್ಲಿನ ಮತದಾರರು ಜಿದ್ದಾಜಿದ್ದಿನ ಹೋರಾಟವನ್ನು ಕಂಡಿಲ್ಲ. ಇಲ್ಲಿ ಎಡರಂಗದ್ದು ಏಕಪಕ್ಷೀಯ ಗೆಲುವು ಆಗಿತ್ತು.

Advertisement

ಮಾಜಿ ಮುಖ್ಯಮಂತ್ರಿ ಇ.ಕೆ. ನಾಯನಾರ್‌ ಎರಡು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಾಧನೆ ಮಾಡಿದ್ದಾರೆ. 1939ರಲ್ಲಿ ಕೊಡಕ್ಕಾಡ್‌ನ‌ಲ್ಲಿ ಆಯೋಜಿಸಿದ ಕೃಷಿಕರ ಮಹಾ ಅಧಿವೇಶನ, ಪಂಕ್ತಿ ಭೋಜನ, ಭೂಸಮರ ಮೊದಲಾದ ಹೋರಾಟಗಳಿಗೆ ಸಾಕ್ಷಿಯಾದ ಪ್ರದೇಶವಾಗಿದೆ. ಇದು ಎಡರಂಗವನ್ನು ಭದ್ರಗೊಳಿಸಲು ಪ್ರಮುಖ ಕಾರಣವಾಯಿತು.

ತೃಕ್ಕರಿಪುರ, ಪಡನ್ನ, ವಲಿಯಪರಂಬ, ಪಿಲಿಕ್ಕೋಡು, ಚೆರ್ವತ್ತೂರು, ವೆಸ್ಟ್‌ ಎಳೇರಿ, ಈಸ್ಟ್‌ ಎಳೇರಿ, ಚೀಮೇನಿ ಗ್ರಾಮ ಪಂಚಾಯತ್‌ಗಳು ಮತ್ತು ನೀಲೇಶ್ವರ ನಗರಸಭೆ ಒಳಗೊಂಡಿರುವ ಕ್ಷೇತ್ರವಾಗಿದೆ ತೃಕ್ಕರಿಪುರ ವಿಧಾನಸಭಾ ಕ್ಷೇತ್ರ. ನೀಲೇಶ್ವರ ನಗರಸಭೆ, ಕಯ್ಯೂರು-ಚೀಮೇನಿ, ಚೆರ್ವತ್ತೂರು, ಪಿಲಿಕ್ಕೋಡು, ವೆಸ್ಟ್‌ ಎಳೇರಿ ಪಂಚಾಯತ್‌ಗಳಲ್ಲಿ ಎಡರಂಗ ಆಡಳಿತವಿದೆ. ತೃಕ್ಕರಿಪುರ, ವಲಿಯಪರಂಬ, ಪಡನ್ನ ಪಂಚಾಯತ್‌ಗಳಲ್ಲಿ ಯುಡಿಎಫ್‌ ಅಡಳಿತವಿದೆ. ಈಸ್ಟ್‌ ಎಳೇರಿ ಗ್ರಾಮ ಪಂಚಾಯತ್‌ ಯುಡಿಎಫ್‌ ಭಿನ್ನಮತೀಯ ಡಿ.ಡಿ.ಎಫ್‌. ಆಡಳಿತದಲ್ಲಿದೆ.

1977, 1980ರಲ್ಲಿ ಪಿ. ಕರುಣಾರನ್‌, 1982 ರಲ್ಲಿ ಒ.ಭರತನ್‌, 1987ರಲ್ಲಿ ಮತ್ತು 91ರಲ್ಲಿ ಇ.ಕೆ. ನಾಯನಾರ್‌, 1996 ಮತ್ತು 2001ರಲ್ಲಿ ಕೆ.ಪಿ. ಸತೀಶ್ಚಂದ್ರನ್‌, 2006 ಮತ್ತು 2011ರಲ್ಲಿ ಕೆ. ಕುಂಞಿರಾಮನ್‌ ಗೆಲುವು ಸಾಧಿಸಿದ್ದರು. 2016 ರಿಂದ ಎಂ.ರಾಜಗೋಪಾಲನ್‌ ಶಾಸಕರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಎಲ್‌ಡಿಎಫ್‌ 3,516 ಮತಗಳ ಮುನ್ನಡೆಗಳಿಸಿತ್ತು. 2016ರ ವಿಧಾನಸಭಾ ಚುನಾವಣೆಯಲ್ಲಿ ಅದು 16,959ಕ್ಕೇರಿತು. ಒಟ್ಟು ಮತದಾನದ ಪೈಕಿ ಶೇ. 51ರಷ್ಟು ಮತವನ್ನು ಎಲ್‌ಡಿಎಫ್‌ ಪಡೆದಿತ್ತು.

ವಲಿಯಪರಂಬ, ಪಡನ್ನ, ವೆಸ್ಟ್‌ ಎಳೇರಿ ಪಂಚಾಯತ್‌ಗಳಲ್ಲಿ ಯುಡಿಎಫ್‌ಗೆ ಕನಿಷ್ಠ ಮುನ್ನಡೆಯನ್ನು ತಂದು ಕೊಟ್ಟಿದ್ದರೆ, ಕಯ್ಯೂರು-ಚೀಮೇನಿ, ಚೆರ್ವತ್ತೂರು ಗ್ರಾಮ ಪಂಚಾಯತ್‌ ಮತ್ತು ನೀಲೇಶ್ವರ ನಗರಸಭೆಯಲ್ಲಿ ಎಲ್‌ಡಿಎಫ್‌ ಭಾರೀ ಅಂತರದ ಮುನ್ನಡೆಯನ್ನು ಸಾಧಿಸಿತ್ತು. ಈಸ್ಟ್‌ ಎಳೇರಿ, ತೃಕ್ಕರಿಪುರ ಪಂಚಾಯತ್‌ಗಳಲ್ಲಿ ಯುಡಿಎಫ್‌ ಮೇಲುಗೈ ಸಾಧಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 1,78,329 ಮಂದಿ ಮತದಾರರಿದ್ದರು. ಸಿಪಿಎಂನ ಪಿ.ಕರುಣಾಕರನ್‌ 65,452 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಟಿ.ಸಿದ್ದಿಕ್‌ 62,001 ಮತಗಳನ್ನು ಪಡೆದಿದ್ದರು. ಬಿಜೆಪಿಯ ಕೆ.ಸುರೇಂದ್ರನ್‌ 12,990 ಮತಗಳನ್ನು ಪಡೆದಿದ್ದರು.

Advertisement

2016ರ ವಿಧಾನಸಭಾ ಚುನಾವಣೆಯಲ್ಲಿ 1,90,119 ಮತದಾರರಿದ್ದರು. ಎಲ್‌ಡಿಎಫ್‌ನ ಎಂ. ರಾಜಗೋಪಾಲನ್‌ 79,286 ಮತಗಳನ್ನು ಪಡೆದಿ ದ್ದರೆ, ಯುಡಿಎಫ್‌ನ ಕೆ.ಪಿ.ಕುಂಞಿಕಣ್ಣನ್‌ 62,327 ಮತಗಳನ್ನು ಪಡೆದಿದ್ದರು. ಎನ್‌ಡಿಎ ಅಭ್ಯರ್ಥಿ ಎಂ.ಭಾಸ್ಕರನ್‌ 10,767 ಮತಗಳನ್ನು ಪಡೆದಿದ್ದರು. ಈ ಬಾರಿ ಮತದಾರರ ಸಂಖ್ಯೆ 1,93,143ಕ್ಕೇರಿದೆ. ಎಲ್‌ಡಿಎಫ್‌ನ ಭದ್ರ ಕೋಟೆಯಾಗಿರುವ ತೃಕ್ಕರಿಪುರ ವಿಧಾನಸಭಾ ಕ್ಷೇತ್ರ ದಲ್ಲಿ ಬದಲಾವಣೆಯ ಗಾಳಿ ಬೀಸಿತೇ ಎಂಬುದು ಡಾಲರ್‌ ಪ್ರಶ್ನೆಯಾಗಿದೆ. ಈ ಕ್ಷೇತ್ರದಿಂದ ಮುನ್ನಡೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಎಲ್‌ಡಿಎಫ್‌ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್‌ ಹೇಳುತ್ತಿದ್ದರೆ, ಯುಡಿಎಫ್‌ ಮುನ್ನಡೆ ಸಾಧಿಸಲಿದೆ ಎಂದು ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ಮ ಈ ಕ್ಷೇತ್ರದಲ್ಲಿ ಅಚ್ಚರಿಯ ಮುನ್ನಡೆಯನ್ನು ಸಾಧಿಸಲಿದೆ ಎಂದು ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ತುಂಬು ಭರವಸೆಯಲ್ಲಿದ್ದಾರೆ.

ಪಂಚಾಯತ್‌ಗಳ ವಾರ್ಡ್‌ಗಳ ಅಂಕಿಅಂಶ
ವಲಿಯಪರಂಬ : ಯುಡಿಎಫ್‌-1, ಎಲ್‌ಡಿಎಫ್‌-6
ತೃಕ್ಕರಿಪುರ : ಯುಡಿಎಫ್‌-16, ಎಲ್‌ಡಿಎಫ್‌-5, ಎಲ್‌ಜೆಡಿ-1
ಪಿಲಿಕ್ಕೋಡು : ಎಲ್‌ಡಿಎಫ್‌-15,  ಯುಡಿಎಫ್‌-1
ಪಡನ್ನ : ಯುಡಿಎಫ್‌-9, ಎಲ್‌ಡಿಎಫ್‌-6
ಚೆರ್ವತ್ತೂರು : ಎಲ್‌ಡಿಎಫ್‌-12, ಯುಡಿಎಫ್‌-4, ಸ್ವತಂತ್ರ-1
ಕಯ್ನಾರು-ಚೀಮೇನಿ : ಎಲ್‌ಡಿಎಫ್‌-15, ಯುಡಿಎಫ್‌-1
ನೀಲೇಶ್ವರ : ಎಲ್‌ಡಿಎಫ್‌-19, ಯುಡಿಎಫ್‌-13
ಈಸ್ಟ್‌ ಎಳೇರಿ : ಡಿ.ಡಿ.ಎಫ್‌-10, ಕೇರಳ ಕಾಂಗ್ರೆಸ್‌-1, ಎಲ್‌ಡಿಎಫ್‌-4
ವೆಸ್ಟ್‌ ಎಳೇರಿ : ಎಲ್‌ಡಿಎಫ್‌-11, ಯುಡಿಎಫ್‌-7

Advertisement

Udayavani is now on Telegram. Click here to join our channel and stay updated with the latest news.

Next