ಕಾಸರಗೋಡು: ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಮತ್ತು ಜಾತ್ಯತೀತತೆ ಉಳಿಯ ಬೇಕಾದರೆ ಕೇರಳದಲ್ಲಿ ಎಡರಂಗ ಸರಕಾರ ಅಧಿಕಾರಕ್ಕೆ ಬರಬೇಕೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ನೀಲೇಶ್ವರದಲ್ಲಿ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಎಂ.ರಾಜಗೋಪಾಲ ಪರ ಚುನಾವಣಾ ಪ್ರಚಾರಾರ್ಥ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಎಡರಂಗ ತನ್ನ ಪ್ರಣಾಳಿಕೆಯಲ್ಲಿ ಹೇಳಿದ 600 ಭರವಸೆಗಳಲ್ಲಿ 580 ನ್ನು ಪೂರೈಸಿದೆ. ಕೋವಿಡ್ ಸಹಿತ ವಿವಿಧ ಸಂಕಷ್ಟ ಸಮಯದಲ್ಲಿ ರಾಜ್ಯ ಸರಕಾರ ಜನರ ನೋವಿಗೆ ಸ್ಪಂದಿಸಿದೆ. ಜನರ ಹೋರಾಟಗಳನ್ನು ಹತ್ತಿಕ್ಕಲು ಕೆಲವು ಸರಕಾರ ಪ್ರಯತ್ನಿಸುತ್ತಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಇತರ ಸರಕಾರಗಳು ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ ಎಂದು ಆರೋಪಿಸಿದರು.
ಸಾರ್ವಜನಿಕ ಆರೋಗ್ಯ ವಲಯವನ್ನು ಕೇಂದ್ರ ಸರಕಾರ ಕಡೆಗಣಿಸಿದರೆ ರಾಜ್ಯ ಸರಕಾರ ಈ ವಲಯವನ್ನು ಪ್ರೋತ್ಸಾಹಿಸುತ್ತಿದೆ ಎಂದರು. ಸಭೆಯಲ್ಲಿ ಜಿ.ಎಸ್.ಗೋಪಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಮಾಜಿ ಸಂಸದ ಪಿ.ಕರುಣಾಕರನ್, ಕೆ.ಪಿ.ಸತೀಶ್ಚಂದ್ರನ್, ಪಿ.ಜನಾರ್ದನನ್, ಶಾಸಕ ಎಂ.ರಾಜಗೋಪಾಲ ಉಪಸ್ಥಿತರಿದ್ದರು.