Advertisement

ಪಾಲಿಕೆಗೆ ಕಾಣುತ್ತಿಲ್ಲ ಎಲ್‌ಇಡಿ ಫ‌ಲಕ!

01:09 AM Sep 08, 2019 | Lakshmi GovindaRaju |

ಬೆಂಗಳೂರು: ನಗರದ ವಿವಿಧ ಶಾಪಿಂಗ್‌ ಮಾಲ್‌, ಪಬ್‌ ಮತ್ತು ಖಾಸಗಿ ಕಂಪನಿಗಳ ಕಟ್ಟಡಗಳಲ್ಲಿ ಅಕ್ರಮವಾಗಿ ಎಲ್‌ಇಡಿ ಡಿಸ್‌ಪ್ಲೇ (ಜಾಹೀರಾತು) ಅಳವಡಿಸಲಾಗಿದೆ. ಆದರೆ, ಈ ಬಗ್ಗೆ ಬಿಬಿಎಂಪಿ ಇದಿವರೆಗೂ ಯಾವುದೇ ದೂರು ದಾಖಲಿಸಿಕೊಂಡಿಲ್ಲ.

Advertisement

ಪ್ರಮುಖ ವಾಣಿಜ್ಯ ಪ್ರದೇಶಗಳಾದ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಮಹದೇವಪುರ, ಇಂದಿರಾನಗರ ಹಾಗೂ ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಲ್‌ಇಡಿ ಡಿಸ್‌ಪ್ಲೇಗಳನ್ನು ಅಕ್ರಮವಾಗಿ ಅಳಡಿಸಲಾಗಿದೆ. ಕಟ್ಟಡ ಮಾಲೀಕರಿಗಾಗಲಿ ಅಥವಾ ಜಾಹೀರಾತು ಕಂಪನಿಗಾಗಲಿ ಈವರೆಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ಸಹ ನೀಡಿಲ್ಲ!

ಒಂದು ವರ್ಷದ ಹಿಂದೆಯೇ ಫ್ಲೆಕ್ಸ್‌, ಬಂಟಿಂಗ್ಸ್‌, ಬ್ಯಾನರ್‌, ಹೋರ್ಡಿಂಗ್ಸ್‌ ಹಾಗೂ ಎಲ್‌ಇಡಿ ಡಿಸ್‌ಪ್ಲೇ (ಎಲ್‌ಇಡಿ ಜಾಹೀರಾತು) ಪ್ರದರ್ಶನಕ್ಕೆ ನಿಷೇಧ ವಿಧಿಸಲಾಗಿದೆ. ಆದರೆ, ನಗರದ ಹಲವು ಭಾಗಗಳಲ್ಲಿ ಖಾಸಗಿ ಕಂಪನಿಗಳು ಕಾನೂನು ಬಾಹಿರವಾಗಿ ಎಲ್‌ಇಡಿ ಡಿಸ್‌ಪ್ಲೇಗಳನ್ನು ಅಳವಸಿವೆ.

“ನಗರದಲ್ಲಿ ಯಾವುದೇ ಸಂಸ್ಥೆ ಅಥವಾ ಮಾಲ್‌ಗ‌ಳಿಗೆ ಎಲ್‌ಇಡಿ ಡಿಸ್‌ಪ್ಲೇ ಅಳವಡಿಸುವುದಕ್ಕೆ ಅವಕಾಶ ನೀಡಿರುವುದಿಲ್ಲ. ಒಂದೊಮ್ಮೆ ನಿಯಮ ಉಲ್ಲಂಘನೆ ಮಾಡಿ ಎಲ್‌ಇಡಿ ಡಿಸ್‌ಪ್ಲೇ ಅಳವಡಿಸಿಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಎಫ್ಐಆರ್‌ ದಾಖಲಿಸಲಾಗುವುದು’ ಎಂದು ಬಿಬಿಎಂಪಿಯ ಮಾಜಿ ಆಯುಕ್ತ ಮಂಜುನಾಥ ಪ್ರಸಾದ್‌ ಹೇಳಿದ್ದರು. ಆದರೆ, ಅಕ್ರಮವಾಗಿ ಎಲ್‌ಇಡಿ ಡಿಸ್‌ಪ್ಲೇ ಅಳವಡಿಸಿಕೊಂಡವರ ವಿರುದ್ಧ ಇದುವರೆಗೆ ಒಂದೇ ಒಂದು ಎಫ್ಐಆರ್‌ ದಾಖಲಿಸಿಕೊಂಡಿಲ್ಲ.

ಎಲ್‌ಇಡಿ ಡಿಸ್‌ಪ್ಲೇ ಕಾಣಿಸಲಿಲ್ಲ: ಅಕ್ರಮವಾಗಿ ಎಲ್‌ಇಡಿ ಡಿಸ್‌ಪ್ಲೇ ಅಳವಡಿಸಿಕೊಂಡಿರುವ ಕಂಪನಿಗಳ ಬಗ್ಗೆ ಹಾಗೂ ಅಕ್ರಮವಾಗಿ ಎಲ್‌ಇಡಿ ಜಾಹೀರಾತು ಅಳವಡಿಸಿಕೊಂಡ ಆರೋಪದ ಮೇಲೆ ಎಫ್ಐಆರ್‌ ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡುವಂತೆ “ಉದಯವಾಣಿ’ಯು ಬಿಬಿಎಂಪಿಯ ಎಂಟು ವಲಯದ ಅಧಿಕಾರಿಗಳಿಂದ ಮಾಹಿತಿ ಕೇಳಿತ್ತು.

Advertisement

ಇದಕ್ಕೆ ಬಿಬಿಎಂಪಿಯ ಅಧಿಕಾರಿಗಳು “ಯಾವುದೇ ಎಲ್‌ಇಡಿ ಜಾಹೀರಾತು ಇರುವುದಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಹಲವು ವಲಯಗಳಲ್ಲಿ ಖಾಸಗಿ ಕಂಪನಿಗಳು ಕಣ್ಣಿಗೆ ರಾಚುವಂತೆ ಎಲ್‌ಇಡಿ ಡಿಸ್‌ಪ್ಲೇಗಳನ್ನು ಅಳವಡಿಸಿದ್ದರೂ, ಅಧಿಕಾರಿಗಳು “ಯಾವುದೇ ಎಲ್‌ಇಡಿ ಜಾಹೀರಾತು ಇರುವುದಿಲ್ಲ. ಹೀಗಾಗಿ ಎಫ್ಐಆರ್‌ ದಾಖಲಿಸಿಕೊಂಡಿಲ್ಲ’ ಎಂದು ಮಾಹಿತಿ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಇತ್ಯರ್ಥವಾಗದ ಸ್ಟ್ರಕ್ಚರ್‌ ತೆರವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ಜಾಹೀರಾತು ಫ‌ಲಕಗಳಿವೆ (ಕಬ್ಬಿಣದ ಸ್ಟ್ರಕ್ಚರ್‌). ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ನಿಷೇಧಿಸಿ ವರ್ಷಗಳೇ ಕಳೆದರೂ ಅವುಗಳಲ್ಲಿ ಶೇ.90 ರಷ್ಟು ಸ್ಟ್ರಕ್ಚರ್‌ಗಳನ್ನು ತೆರವುಗೊಳಿಸಿಲ್ಲ. 2018ರ ಆ.30ರ ಒಳಗಾಗಿ ಖಾಸಗಿ ಸ್ಥಳಗಳಲ್ಲಿ ಹಾಕಿರುವ ಜಾಹೀರಾತು ಫ‌ಲಕಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಏಜೆನ್ಸಿಗಳು ಪಾಲಿಕೆಗೆ ಸಲ್ಲಿಸಬೇಕು.

ಇಲ್ಲವೇ, ಫ‌ಲಕಗಳನ್ನು ತೆರವುಗೊಳಿಸಬೇಕು. ಒಂದೊಮ್ಮೆ ಕಂಪನಿಗಳೇ ಫ‌ಲಕ ತರೆವಿಗೆ ಮುಂದಾಗದಿದ್ದರೆ, ಪಾಲಿಕೆಯಿಂದಲೇ ಅಂತಹ ಫ‌ಲಕಗಳನ್ನು ತೆರವು ಮಾಡಲಾಗುವುದು. ಅದರ ವೆಚ್ಚವನ್ನು ಏಜೆನ್ಸಿಗಳಿಂದ ವಸೂಲಿ ಮಾಡಲಾಗತ್ತದೆ ಎಂದು ಬಿಬಿಎಂಪಿ ಹೇಳಿತ್ತು. ಒಂದು ಫ‌ಲಕ ಟನ್‌ಗಟ್ಟಲೆ ತೂಕವಿರುವುದರಿಂದ ಅದನ್ನು ತೆರವುಗೊಳಿಸಲು ಕ್ರೇನ್‌ಗಳ ಅವಶ್ಯಕತೆ ಇದೆ. ಪಾಲಿಕೆ ಬಳಿ 10 ಸಾವಿರ ಫ‌ಲಕಗಳನ್ನು ತೆರವುಗೊಳಿಸಲು ಅಗತ್ಯವಿರುವ ಕ್ರೇನ್‌, ಕಟರ್‌ ಸೇರಿದಂತೆ ಸಿಬ್ಬಂದಿ ಕೊರತೆ ಇದೆ ಎಂದೂ ಹೇಳಲಾಗಿತ್ತು.

ಆದರೆ, ಒಂದು ವರ್ಷವಾದರೂ ಫ‌ಲಕಗಳನ್ನು ತೆರವುಗೊಳಿಸಿಲ್ಲ. “ಜಾಹೀರಾತು ನೀತಿ ಅಂತಿಮವಾಗಿಲ್ಲ. ಕೆಲವು ಪ್ರಕರಣಗಳು ಕೋರ್ಟ್‌ನಲ್ಲಿ ಇರುವುದರಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಈ ರೀತಿ ಇನ್ನೂ ಜಾಹೀರಾತು ಫ‌ಲಕಗಳನ್ನು ತೆರವು ಮಾಡದೆ ಉಳಿಸಿಕೊಂಡಿರುವುದರ ಹಿಂದೆ ಮತ್ತೆ ಜಾಹೀರಾತಿಗೆ ಅವಕಾಶ ಮಾಡಿಕೊಡುವ ಹುನ್ನಾರವೂ ಇದೆ ಎನ್ನುವ ಆರೋಪವೂ ಇದೆ.

ಎಲ್‌ಇಡಿ ಡಿಸ್‌ಪ್ಲೇಗಳನ್ನು ಅಳವಡಿಸಿಕೊಳ್ಳುವುದಕ್ಕೆ ಬಿಬಿಎಂಪಿ ಅವಕಾಶ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು.
-ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next