ಚೇಳಾಯಿರು : ವಿದ್ಯುತ್ ಮಿತ ಬಳಕೆಯ ಉದ್ದೇಶದಿಂದ ದ.ಕ. ಜಿಲ್ಲೆಯ ವ್ಯಾಪ್ತಿಯ ಚೇಳಾಯರು ಗ್ರಾಮದಲ್ಲಿ ಹಾಲಿ ವಿದ್ಯುತ್ ಬೀದಿ ದೀಪಗಳನ್ನು ಸಂಪೂರ್ಣವಾಗಿ ಎಲ್‌ಇಡಿ ವಿದ್ಯುತ್ ದೀಪಗಳನ್ನಾಗಿ ಪರಿವರ್ತಿಸುವ ಯೋಜನೆ ಜಾರಿಯಾಗಿದೆ.
ವಿದ್ಯುತ್ ಮಿತಬಳಕೆ ದೃಷ್ಟಿಯಿಂದ ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಯೋಜನೆಯ ಪ್ರಸ್ತಾವನೆಯನ್ನು ಆಯಾ ರಾಜ್ಯದ ಸ್ಥಳೀಯ ಸಂಸ್ಥೆಗಳು ಅಳವಡಿಸಿಕೊಳ್ಳುತ್ತಿದ್ದು, ಚೇಳಾಯಿರು ಗ್ರಾಮ ಪಂಚಾಯತ್ ಇದನ್ನು ವೇಗವಾಗಿ ಅನುಷ್ಠಾನಗೊಳಿಸುವತ್ತ ಮುಂದಡಿಯಿರಿಸಿದೆ.
ಚೇಳಾಯಿರು ಗ್ರಾಮ ಪಂಚಾಯತ್ ವ್ಯಾಪ್ತಿಯು ಚೇಳಾಯಿರು ಮಧ್ಯ ಎಂ.ಆರ್.ಪಿ.ಎಲ್. ನಿರ್ವಸಿತರ ಕಾಲನಿ ಮೂರು ಗ್ರಾಮಗಳನ್ನು ಒಳಗೊಂಡಿದೆ. ಚೇಳಾಯಿರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಎಲ್ಲ ರಸ್ತೆಗಳಿಗೆ ದಾರಿದೀಪ ವ್ಯವಸ್ಥೆ ಇದ್ದು. ಒಳಗಡೆಯ ಹೆಚ್ಚಿನ ರಸ್ತೆಗಳಿಗೆ ದಾರಿದೀಪದ ವ್ಯವಸ್ಥೆ ಗ್ರಾಮ ಪಂಚಾಯತ್‌ನಿಂದ ಆಗಿದೆ.
ತಿಂಗಳಿಗೆ 20 ಸಾವಿರ ರೂ. ಉಳಿತಾಯ
ಗ್ರಾಮ ಪಂಚಾಯತ್ ಗೆ ದಾರಿದೀಪದ ವಿದ್ಯುತ್ ಬಿಲ್ಲು ತಿಂಗಳಿಗೆ ಸುಮಾರು 40,000 ರೂ. ಬರುತ್ತಿದ್ದು. ಇದನ್ನು ಮನಗಂಡ ಗ್ರಾಮ ಪಂಚಾಯತ್ ಈ ಬಗ್ಗೆ ಎಂ.ಆರ್.ಪಿ.ಎಲ್. ಸಂಸ್ಥೆಗೆ ಮನವಿ ನೀಡಿದ್ದು ಇದಕ್ಕೆ ಸ್ಪಂದನೆ ನೀಡಿದ ಎಂ.ಆರ್.ಪಿ.ಎಲ್. ಸಂಸ್ಥೆ ಗ್ರಾಮ ಪಂಚಾಯತ್‌ಗೆ ಸೋಲಾರ್ ದಾರಿದೀಪ ಅಳವಡಿಸಲು ಸುಮಾರು 25 ಲಕ್ಷ ರೂ. ಬಿಡುಗಡೆ ಮಾಡಿದೆ.
ಇದರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಚೇಳಾಯಿರುವಿನ ಮುಖ್ಯ ರಸ್ತೆಗೆ ಸೋಲಾರ್ ದಾರಿದೀಪ ಅಳವಡಿಸಿದೆ. ಇದರಿಂದ ಗ್ರಾ.ಪಂ.ಗೆ 20,000 ರೂ. ತಿಂಗಳಿಗೆ ವಿದ್ಯುತ್ ಬಿಲ್ಲು ಉಳಿತಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ 15 ಲಕ್ಷ ರೂ.ಗಳಲ್ಲಿ ಗ್ರಾಮ ಪಂಚಾಯತ್‌ನ ಎಲ್ಲ ಮುಖ್ಯ ರಸ್ತೆಗಳಿಗೆ ಸೋಲಾರ್ ದೀಪ ಅಳವಡಿಸಿ ಇನ್ನಷ್ಟು ವಿದ್ಯುತ್ ಉಳಿತಾಯ ಮತ್ತು ಪಂಚಾಯತ್‌ಗೆ ಆದಾಯ ಉಳಿಸಲು ಸಾಧ್ಯವಿದೆ.
ವಿವಿಧ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನ
ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನ ಪ್ರಗತಿಯಲ್ಲಿದೆ. ಇದೀಗ ರಾಜ್ಯದಲ್ಲೂ ಎಲ್ಲ ಸ್ಥಳೀಯ ಸಂಸ್ಥೆಗಳು ಹಾಲಿ ಬೀದಿ ದೀಪಗಳನ್ನು ಎಲ್‌ಇಡಿ ವಿದ್ಯುತ್ ದೀಪಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ.
ಎಲ್‌ಇಡಿ ಅಳವಡಿಕೆ ದುಬಾರಿ
ಎಲ್‌ಇಡಿ ಅಳವಡಿಕೆ ದುಬಾರಿ ಆಗಿದ್ದು, ಅನುದಾನದ ಕೊರತೆಯಿಂದ ಈ ಯೋಜನೆ ಎಲ್ಲೂ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಅಳವಡಿಕೆಗೆ ತಗಲುವ ಹೊರೆಯನ್ನು ಹೊರಲು ಸ್ಥಳೀಯ ಸಂಸ್ಥೆಗಳಿಂದ ಸಾಧ್ಯವಿಲ್ಲ.
ಚೇಳಾಯಿರು ಗ್ರಾಮ ಪಂಚಾಯತ್‌ಗೆ ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ನಿಧಿ ಒದಗಿಸಿ ಸಹಾಯ ಹಸ್ತ ಚಾಚಿದೆ. ಕೇಂದ್ರೀಕೃತ ನಿರ್ವಹಣೆ ವ್ಯವಸ್ಥೆಯಿಂದ ವಿದ್ಯುತ್ ಪೋಲಾಗುವುದನ್ನೂ ಇದರಿಂದ ತಡೆಗಟ್ಟಬಹುದು. ಶೇ.45 ವಿದ್ಯುತ್ ಉಳಿತಾಯ ಸಾಧ್ಯವಿದ್ದು, ಇದೊಂದು ಬಹುಪಯೋಗಿ ಯೋಜನೆಯಾಗಿದೆ. ಎಲ್‌ಇಡಿ ದೀಪಗಳಲ್ಲಿ ಬೆಳಕಿನ ಪ್ರಖರತೆಯೂ ಹೆಚ್ಚಾಗಿರಲಿದ್ದು, ಸುಗಮ ಸಂಚಾರಕ್ಕೆ ನೆರವಾಗಲಿವೆ.
ವಿದ್ಯುತ್, ಬಿಲ್ ಉಳಿತಾಯ
ಎಲ್‌ಇಡಿ ಅಳವಡಿಕೆಯಿಂದ ವಿದ್ಯುತ್ ಬಿಲ್‌ನಲ್ಲಿ ಉಳಿಯುವುದರ ಜತೆಗೆ ಸವಾರರಿಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲ. ಸೋಲಾರ್ ಮೂಲಕ ಇದರ ಚಾರ್ಜ್ ಕೂಡ ಆಗುತ್ತದೆ. ಯಾವುದೇ ಲೋಪ ದೋಷವಿದ್ದರೆ ಗುತ್ತಿಗೆದಾರರೇ ಸರಿ ಪಡಿಸಿಕೊಡಬೇಕು.ಇಲ್ಲಿನ ಗ್ರಾಮ ಪಂಚಾಯತ್‌ನ್ನು ಆಧುನೀಕರಣಗೊಳಿಸಲು ಬೇಕಾದ ಕ್ರಮವನ್ನು ಹಂತ ಹಂತವಾಗಿ ಕೈಗೊಳ್ಳುತ್ತೇವೆ.
- ವಿಶ್ವನಾಥ್,
ಪಿಡಿಒ ಗ್ರಾ. ಪಂ. ಚೇಳಾಯಿರು
ಪಿಡಿಒ ಗ್ರಾ. ಪಂ. ಚೇಳಾಯಿರು
ನೀರಿನ ಇ ಬಿಲ್ ವ್ಯವಸ್ಥೆ ಚಿಂತನೆ
ಚೇಳಾಯಿರು ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ಇದೀಗ ಎಲ್‌ಇಡಿ ಅಳವಡಿಕೆ ಅದರ ಒಂದು ಭಾಗವಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಇ ಬಿಲ್ ವ್ಯವಸ್ಥೆ ಕೈಗೊಳ್ಳುತ್ತೇವೆ.
– ಜಯಾನಂದ
ಅಧ್ಯಕ್ಷರು, ಗ್ರಾ.ಪಂ. ಚೇಳಾಯಿರು
ಲಕ್ಷ್ಮೀನಾರಾಯಣ ರಾವ್