Advertisement
ನಗರದಲ್ಲಿ ಸಾಂಪ್ರದಾಯಿಕ ದೀಪಗಳ ಬದಲಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸುವ ಯೋಜನೆ ಅನುಷ್ಠಾನ ಕುರಿತು ಸಮೀಕ್ಷೆ ನಡೆಸಲು ಪ್ರೈಸ್ ವಾಟರ್ ಹೌಸ್ ಕೂಪರ್ ಇಂಡಿಪೆಂಡೆಂಟ್ ಎಂಜಿನಿಯರ್ ಎಂಬ ಸಂಸ್ಥೆಗೆ ಕಾರ್ಯಾದೇಶ ನೀಡಲು ಪಾಲಿಕೆ ಮುಂದಾಗಿದ್ದು, ಮುಂದಿನ ಪಾಲಿಕೆ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
Related Articles
Advertisement
ನಗರದಲ್ಲಿ ಎಲ್‌ಇಡಿ ಬಳಕೆಯಿಂದ ಶೇ.85ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಎಂದು ಖಾಸಗಿ ಸಂಸ್ಥೆ ಹೇಳಿತ್ತು. ಆದರೆ, ಸಮೀಕ್ಷೆ ಪೂರ್ಣಗೊಳ್ಳದ ಹೊರತು, ಎಲ್‌ಇಡಿ ದೀಪಗಳ ಅಳವಡಿಕೆಯ ಗುತ್ತಿಗೆ ಪಡೆದಿರುವ ಕಂಪನಿ ಕೆಲಸ ಆರಂಭಿಸಲು ಆಗುವುದಿಲ್ಲ. ಈ ರೀತಿಯ ಗೊಂದಲಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಸಮೀಕ್ಷೆ ನಡೆಸಲು ಪಾಲಿಕೆ ಮುಂದಾಗಿದ್ದು, ಸಮೀಕ್ಷಾ ವರದಿಯಲ್ಲಿ ಯೋಜನೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಮಾತ್ರ ಯೋಜನೆ ಅನುಷ್ಠಾನವಾಗಲಿದೆ. ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಅಧಿಕಾರಿಗಳು ಹೇಳುವಂತೆ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೇಯರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಯೋಜನೆ ಕೈಬಿಡುವ ಸಾಧ್ಯತೆಯೂ ಇದೆ ಎಂದಿದ್ದಾರೆ. ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಯೋಜನೆಗೆ ಬಿಬಿಎಂಪಿ ಹಣ ಖರ್ಚು ಮಾಡುತ್ತಿಲ್ಲ. ಖಾಸಗಿ ಸಂಸ್ಥೆಯೇ 10 ವರ್ಷ ನಿರ್ವಹಣೆ ಮಾಡಲಿತ್ತು. ಒಟ್ಟು 800 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹಾಗೂ ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ 17 ಕೋಟಿ ರೂ. ಉಳಿಯವಾಗಲಿದೆ ಎಂದೂ ಅಂದಾಜಿಸಲಾಗಿತ್ತು. ಪೈಕಿ 13.50 ಕೋಟಿ ರೂ.ಗಳನ್ನು ಪಾಲಿಕೆಯೇ ಕಂಪನಿಗೆ ಪಾವತಿ ಮಾಡುವ ಕುರಿತು ಒಪ್ಪಂದವಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ 4.85 ಲಕ್ಷ ಬೀದಿ ದೀಪಗಳಿದ್ದು, ಇವುಗಳ ವಾರ್ಷಿಕ ವಿದ್ಯುತ್ ವೆಚ್ಚ 200 ಕೋಟಿ ರೂ. ಬರುತ್ತಿದೆ. 40ರಿಂದ 50 ಕೋಟಿ ರೂ. ನಿರ್ವಹಣೆಗೆ ಖರ್ಚಾಗುತ್ತಿದೆ. ಇದನ್ನು ಉಳಿಸುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಿಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿತ್ತು.
ಸಮೀಕ್ಷೆಗೆ ಕಾರ್ಯಾದೇಶ ನೀಡಲು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು. ವರದಿ ನೋಡಿಕೊಂಡು ಯೋಜನೆ ಅನುಷ್ಠಾನದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. –ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
-ಹಿತೇಶ್ ವೈ