ವಾಹನಗಳ ಅಂದವನ್ನು ಹೆಚ್ಚಿಸಲು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ, ಅದಕ್ಕೆಂದೇ ಇತ್ತೀಚೆಗೆ ವಾಹನಗಳಲ್ಲಿ
ವಿವಿಧ ವಿನ್ಯಾಸಗಳು ರೂಪುಗೊಳ್ಳುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ಎಂದರೆ ವಾಹನಗಳಲ್ಲಿ ಬಳಸುವಂತಹ ಎಲ್‌ಇಡಿ ಬಲ್ಬ್ ಗಳು.
ಇತ್ತೀಚಿನ ದಿನಗಳಲ್ಲಿ ಇದು ಟ್ರೆಂಡ್ ಆಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ತಕ್ಕಂತೆಯೇ ವಾಹನ ಸಂಸ್ಥೆಗಳು ಕೂಡ ಕಾರು, ಬೈಕ್‌ಗಳಿಗೆ ಮೂಲದಲ್ಲಿಯೇ ಎಲ್‌ಇಡಿ ಬಲ್ಬ್ ಗಳನ್ನು ಸೇರ್ಪಡಿಸಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಈಗಾಗಲೇ ಇರುವಂತಹ ಮಾಮೂಲಿ ಹೆಡ್‌ಲೈಟ್ ಗಳಿಗೆ ಹೋಲಿಕೆ ಮಾಡಿದರೆ ಎಲ್‌ಇಡಿ ಬಲ್ಬ್ ಗಳು. ಹೆಚ್ಚು ಪ್ರಕಾಶಮಾನವಾಗಿ ಉರಿಯುತ್ತವೆ.
ಲೆಡ್ ಫಾಗ್ ಲೈಟ್, ಅಕ್ಸಲರಿ ಎಲ್‌ಇಡಿ ಲ್ಯಾಂಪ್, ಎಲ್‌ಇಡಿ ಫಾಗ್ ಲೈಟ್, ಸ್ಪಾಟ್ ಲೆಡ್ ಲೈಟ್, ವೈಟ್ ಇಂಟೀರಿಯರ್ ಲೈಟ್, ಕ್ರೀ ಎಲ್‌ಇಡಿ ಫಾಗ್ ಲೈಟ್ ಸೇರಿದಂತೆ ವಾಹನಗಳ ವಿವಿಧ, ವಿನ್ಯಾಸಗಳುಳ್ಳ ಎಲ್‌ಇಡಿ ಬಲ್ಬ್ ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ವಾಹನಗಳಲ್ಲಿ ಬಳಕೆ ಮಾಡುವಂತಹ ಎಲ್‌ಇಡಿ ಲೈಟ್‌ಗಳಲ್ಲಿ ಬೇರೇ ಬೇರೇ ಗಾತ್ರಗಳಿಂದ ಕೂಡಿರುತ್ತದೆ.
ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 35 ರಿಂದ 45 ವ್ಯಾಟ್ ಸಾಮರ್ಥ್ಯ ಹೊಂದಿದ ಎಲ್‌ಇಡಿ ಬಲ್ಬ್ ಗಳ ಬಳಕೆ ಮಾಡಲಾಗುತ್ತದೆ. ಹೆಚ್ಚು ಸಾಮರ್ಥ್ಯದ ಬಲ್ಬ್ ಗಳು ಕಾರುಗಳಿಗೆ ಬಳಕೆ ಮಾಡಿದರೆ ಕಡಿಮೆ ಸಾಮರ್ಥ್ಯದ ಬಲ್ಬ್ ಗಳನ್ನು ಬೈಕ್‌ಗಳಿಗೆ ಹಾಕಲಾಗುತ್ತದೆ. ವಾಹನಗಳಲ್ಲಿರಾತ್ರಿ ಸಮಯ ಸಂಚರಿಸುವಾಗ ರಸ್ತೆಗಳು ಹೆಚ್ಚಿನ ಪ್ರಕಾಶಮಾನವಾಗಿ ಕಾಣುವ ಸಲುವಾಗಿ ಹೆಡ್‌ಲೈಟ್‌ಗಳ ಜತೆಗೆ ಇನ್ನಿತರ ಕಡೆಗಳಲ್ಲಿ ಲೈಟ್ ಜೋಡಿಸುವ ಕ್ರಮ ಕೂಡ ಹೆಚ್ಚಾಗುತ್ತಿದೆ. ಬೈಕ್‌ಗಳ ಹ್ಯಾಂಡಲ್, ಮಡ್‌ಗಾರ್ಡ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿಯೂ ಚಿಕ್ಕದಾದ ಎಲ್‌ಇಡಿ ಬಲ್ಬ್ ಗಳನ್ನು ಬಳಕೆ ಮಾಡಲಾಗುತ್ತದೆ.
ಗ್ರಾಹಕರಿಗೂ ಆಸಕ್ತಿ
ವಾಹನಗಳಲ್ಲಿ ಎಲ್‌ಇಡಿ ಬಲ್ಬ್ ಬಳಕೆ ನಿಷೇಧ ಎಂದಿದ್ದರೂ, ಗ್ರಾಹಕರು ಇದನ್ನೇ ಇಷ್ಟಪಡುತ್ತಾರೆ. ಇತ್ತೀಚೆಗೆ ಮಾರುಕಟ್ಟೆಗೆ ಬರುವಂತಹ ಅನೇಕ ವಾಹನಗಳಲ್ಲಿ ಎಲ್‌ಇಡಿ ಬಲ್ಬ್ ಒಳಗೊಂಡ ಹೆಡ್‌ಲೈಟ್‌ಗಳು ಬರುತ್ತದೆ. ಅಲ್ಲದೆ ಹೆಚ್ಚಾಗಿ ಗ್ರಾಹಕರು ಕೂಡ ಇದೇ ವಿನ್ಯಾಸದ ಬಲ್ಬ್ ಗಳನ್ನು ಇಷ್ಟಪಡುತ್ತಾರೆ.
– ಬಶೀರ್, ಅಂಗಡಿ ಮಾಲಕರು
ನವೀನ್ ಭಟ್, ಇಳಂತಿಲ