Advertisement

ವರ್ಗಾವಣೆ ಮಾರ್ಗಸೂಚಿ ಮಾರ್ಪಾಡಿಗೆ ಉಪನ್ಯಾಸಕರ ಆಗ್ರಹ

10:56 AM Feb 03, 2018 | Team Udayavani |

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವರ್ಗಾವಣೆ ಮಾರ್ಗಸೂಚಿಯಲ್ಲಿ ತುರ್ತಾಗಿ ಕೆಲವು ಮಾರ್ಪಾಡು ಮಾಡುವಂತೆ ಆಗ್ರಹಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಪಿಯು ಇಲಾಖೆ ನಿರ್ದೇಶಕರಿಗೆ ಮನವಿ
ಸಲ್ಲಿಸಲಾಗಿದೆ. 

Advertisement

ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2007ರ ತಿದ್ದುಪಡಿ ಕಾಯ್ದೆ 2017ರ ಪರಿಚ್ಛೇದ 10(1)ರ ಅಡಿಯಲ್ಲಿ ಪತಿ-ಪತ್ನಿ ಪ್ರಕರಣದಡಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಕನಿಷ್ಠ ಸೇವಾ ಅನ್ವಯವಾಗುವುದಿಲ್ಲ ಎಂಬುದು
ಕಾಯ್ದೆಯಲ್ಲಿದ್ದರೂ, ವರ್ಗಾವಣೆ ಮಾರ್ಗಸೂಚಿಯಲ್ಲಿ ಕನಿಷ್ಠ ಸೇವಾವಧಿ 5 ವರ್ಷ ಎಂದು ನಮೂದಿಸಲಾಗಿದೆ. ಇದರಿಂದ ಪತಿ-ಪತ್ನಿ ಪ್ರಕರಣದಡಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ತೊಂದರೆಯಾಗುತ್ತದೆ ಇದನ್ನು ಮೂರು ವರ್ಷಕ್ಕೆ ಇಳಿಸಬೇಕು ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆಗ್ರಹಿಸಿದ್ದಾರೆ. ವರ್ಗಾವಣೆ ಅರ್ಜಿ ಸಲ್ಲಿಸುವ ಕನಿಷ್ಠ ಸೇವಾರ್ಹತೆಯನ್ನು ಐದು ವರ್ಷ ಎಂದು ತಿಳಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿಗದಿ ಪಡಿಸಿರುವ ಮಾರ್ಗಸೂಚಿಯಲ್ಲಿ 3 ವರ್ಷ ಎಂದಿದೆ. ಹೀಗಾಗಿ ಕನಿಷ್ಠ ಸೇವಾರ್ಹತೆಯನ್ನು 3 ವರ್ಷಕ್ಕೆ ಇಳಿಸಬೇಕು. ಹೆಚ್ಚುವರಿ ಉಪನ್ಯಾಸಕರ ವರ್ಗಾವಣೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ ಯಾವುದೇ ಮಾಹಿತಿ ಇಲ್ಲ. ಹೆಚ್ಚುವರಿ ಉಪನ್ಯಾಸಕರಿಗೆ ಶೇ.5ರಂತೆ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ವರ್ಗಾವಣೆಗೆ
ಅರ್ಜಿ ಸಲ್ಲಿಸಲು ಇಲಾಖೆ ರಚಿಸಿರುವ ಅಂತರ್ಜಾಲ ತಂತ್ರಾಂಶ ಉಪನ್ಯಾಸಕರ ಸ್ನೇಹಿಯಾಗಿಲ್ಲ. ಅರ್ಜಿ ಸಲ್ಲಿಕೆಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪಿಯು ಉಪನ್ಯಾಸಕರ ವರ್ಗಾವಣೆ ಸಂಬಂಧ ವೇಳಾಪಟ್ಟಿಯನ್ನು ಪ್ರಕಟಿಸಿದ್ದೇವೆ. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಮುಗಿದ ನಂತರ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಲಾಗುತ್ತದೆ. ಉಪನ್ಯಾಸಕರ ಸಂಘದಿಂದ ನೀಡಿರುವ ಮನವಿ ಪರಿಶೀಲಿಸಲಾಗುವುದು.
ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ   

Advertisement

Udayavani is now on Telegram. Click here to join our channel and stay updated with the latest news.

Next