Advertisement

ಅಕ್ಕನ ಮದುವೆಗೆ ಸಹಾಯ ಮಾಡದಿದ್ದಕ್ಕೆ ಉಪನ್ಯಾಸಕನ ಕೊಲೆ: ಮಗ ಸೇರಿ ಮೂವರ ಬಂಧನ

02:26 PM Jun 01, 2022 | Team Udayavani |

ಶಹಾಪುರ: ತಾಲೂಕಿನ ಕೊಳ್ಳೂರ (ಎಂ) ವ್ಯಾಪ್ತಿಯಲ್ಲಿ ಮೇ 12ರಂದು ನಡೆದ ಉಪನ್ಯಾಸಕ ಮಾನಪ್ಪ ತಿಪ್ಪಣ್ಣ ಗೋಪಾಳಪೂರಕರ್‌ (59) ಎಂಬುವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಯಾದಗಿರಿ ಉಪ ವಿಭಾಗ ಮತ್ತು ಸುರಪುರ ವಿಭಾಗದ ಪ್ರಭಾರಿ ಉಪ ಅಧಿಧೀಕ್ಷಕ ಜೇಮ್ಸ್‌ ಮಿನೇಜೆಸ್‌ ಅವರ ಮಾರ್ಗದರ್ಶನದ ಪೊಲೀಸ್‌ ತಂಡ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹತ್ಯೆಯಾದ ಉಪನ್ಯಾಸಕರ ಮೊದಲನೇ ಪತ್ನಿಯ ಮಗ ಬಸಲಿಂಗಪ್ಪ ಅವರ ಸ್ನೇಹಿತರಾದ ಕಲಬುರಗಿಯ ಮಾರಜಿ ನಗರದ ಸುರೇಶ ಶಂಭುಲಿಂಗ ಕುಂಟೆ (23) ಮತ್ತು ಮಾದೇಶ ಕಟ್ಟಿಮನಿ (20) ಎಂಬುವರನ್ನು ಬಂಧಿಸಲಾಗಿದೆ.

ಕೊಲೆಯಾದ ಉಪನ್ಯಾಸಕ ಮಾನಪ್ಪ ಗೋಪಾಳಪುರ ಅವರ ಮೊದಲನೇಯ ಪತ್ನಿಯ ಮಗ ಬಸಲಿಂಗಪ್ಪ ರಾಜೂ ಮಾನಪ್ಪ ಗೋಪಾಳಪುರ (27) ಈತನನ್ನು ಮೇ 31ರಂದು ಠಾಣೆಗೆ ತಂದು ವಿಚಾರಿಸಿದಾಗ ಸ್ನೇಹಿತರಿಬ್ಬರ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಪಠ್ಯದಲ್ಲಿ ಮೊಘಲರು ಮಾತ್ರವಲ್ಲ, ನಮ್ಮ ರಾಜರೂ ಇರಬೇಕು : ಅಕ್ಷಯ್ ಕುಮಾರ್

ಎರಡನೇ ಪತ್ನಿ ತವರೂರಾದ ತಾಲೂಕಿನ ಹಯ್ನಾಳ(ಬಿ) ಗ್ರಾಮಕ್ಕೆ ಉಪನ್ಯಾಸಕ ಮಾನಪ್ಪ ಹೊರಟಿದ್ದಾಗ, ಮಾರ್ಗ ಮಧ್ಯದಲ್ಲಿ ಕೊಳ್ಳೂರ(ಎಂ) ಗ್ರಾಮ ಸಮೀಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಶಹಾಪುರ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿತ್ತು. ಮೃತ ಮಾನಪ್ಪ ಮೊದಲನೇ ಪತ್ನಿ ಹಾಗೂ ಮಕ್ಕಳನ್ನು ದೂರವಿಟ್ಟಿದ್ದರು ಎನ್ನಲಾಗಿದೆ. ಅವರ ವಿದ್ಯಾಭ್ಯಾಸಕ್ಕಾಗಲಿ ಯಾವುದೇ ಕಾರಣಕ್ಕೂ ಸಹಾಯ, ಸಹಕಾರ ನೀಡಿಲ್ಲ. ಅಲ್ಲದೇ ಮೊದಲನೇ ಪತ್ನಿಯ ಮಗಳ ಮದುವೆಗೆ ಬಂಗಾರ ಕೊಡಿಸುವುದಾಗಿ ಕೊನೆ ಗಳಿಗೆಯಲ್ಲಿ ಕೊಟ್ಟಿಲ್ಲ. ಹೀಗಾಗಿ ನನ್ನ ಅಕ್ಕನ ಮದುವೆಗೆ ಸಹಾಯ ಮಾಡದ, ವಿದ್ಯಾಭ್ಯಾಸಕ್ಕೂ ಸಹಕಾರ ನೀಡದ, 25 ವರ್ಷದಿಂದ ತಾಯಿಯನ್ನು ನರಕಕ್ಕೆ ದೂಡಿದ ಕಾರಣಕ್ಕೆ ತಂದೆಯನ್ನು ಕೊಲೆ ಮಾಡಿರುವ ಕುರಿತು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪ್ರಕಟಣೆಯಲ್ಲಿ ಪೊಲೀಸ್‌ ಅಧೀಕ್ಷಕರು ತಿಳಿಸಿದ್ದಾರೆ.

Advertisement

ಶಹಾಪುರ ಠಾಣೆ ಪಿಐ ಶ್ರೀನಿವಾಸ ಅಲ್ಲಾಪುರೆ, ಪಿಎಸ್‌ಐ ಶಾಮಸುಂದರ್‌ ಸೇರಿದಂತೆ ಸಿಬ್ಬಂದಿಗಳಾದ ನಾರಾಯಣ, ಬಾಬು, ಸತೀಶಕುಮಾರ, ಭಾಗಣ್ಣ, ಸಿದ್ಧರಾಮಯ್ಯ, ಧರ್ಮರಾಜ ಪೊಲೀಸರು ಆರೋಪಿಗಳನ್ನು ಬಂಧಿಸಿದ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next