Advertisement

ಆಮ್ಲಜನಕಕ್ಕಾಗಿ ಅಶ್ವತ್ಥ ಗಿಡ ನೆಟ್ಟ ಉಪನ್ಯಾಸಕ..! ಒಂದು ಎಕರೆ ಜಾಗ ಖರೀದಿಸಿ ಪರಿಸರ ಕಾಳಜಿ

02:40 AM Jun 05, 2021 | Team Udayavani |

ಪುತ್ತೂರು : ತನ್ನ ದುಡಿಮೆಯ ಹಣದಲ್ಲಿ ಒಂದು ಎಕರೆ ಜಾಗ ಖರೀದಿಸಿ ಪರಿಸರದಲ್ಲಿ ಶುದ್ಧ ಆಮ್ಲಜನಕ ಹೆಚ್ಚಳಗೊಳಿಸಲು ಅಶ್ವತ್ಥ ಗಿಡ ನೆಟ್ಟು ಹಸುರು ವನ ನಿರ್ಮಿಸಿದ ಪುತ್ತೂರಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ| ಶ್ರೀಶ ಕುಮಾರ್‌ ಎಂ.ಕೆ. ಅವರ ಪರಿಸರ ಪ್ರೇಮ ಗಮನ ಸೆಳೆದಿದೆ..!

Advertisement

ಅಶ್ವತ್ಥ ಗಿಡ ನೆಟ್ಟರು..!
30 ವರ್ಷಗಳಿಂದ ಮಳೆಕೊಯ್ಲು, ಜಲ ಮೂಲ, ಶುದ್ಧ ಗಾಳಿ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇವರು ಮೂರು ವರ್ಷಗಳ ಹಿಂದೆ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಒಂದು ಎಕರೆ ಜಾಗ ಖರೀದಿಸಿ ಶುದ್ಧ ಪರಿಸರಕ್ಕೆ ಪೂರಕವಾದ ಗಿಡ ನೆಡುವ ಸಂಕಲ್ಪ ತೊಟ್ಟರು. 24 ಅಶ್ವತ್ಥ ಗಿಡ, ಪಚ್ಚೆ ಕರ್ಪೂರ, ನಾಗಸಂಪಿಗೆ, ನಾಗ ಲಿಂಗ, ಅಳಿವಿನಂ ಚಿರುವ ಗಿಡಗಳು ಸೇರಿದಂತೆ ಒಟ್ಟು 130 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಟ್ಯಾಂಕರ್‌ನಲ್ಲಿ ನೀರು ಸಾಗಾಟ
ಆರೋಗ್ಯವಂತ ಪರಿಸರ, ಸಮಾಜಕ್ಕಾಗಿ ಡಾ| ಶ್ರೀಶ ಅವರು ಈ ಸಾಹಸಕ್ಕೆ ಕೈಹಾಕಿದ್ದಾರೆ. ಪುತ್ತೂರಿನಿಂದ 21 ಕಿ.ಮೀ.ದೂರದಲ್ಲಿ ಈ ಜಾಗವಿದ್ದರೂ ಬಿಡುವಿನ ವೇಳೆಯಲ್ಲಿ ಈ ಗಿಡಗಳ ಯೋಗಕ್ಷೇಮ ವಿಚಾರಿಸುತ್ತಾರೆ. ಗಿಡಗಳು ಜೀವ ಪಡೆದುಕೊಳ್ಳುವ ತನಕ ಪೈಪು ಮೂಲಕ ನೀರಿನ ವ್ಯವಸ್ಥೆ ಮಾಡಿದ್ದು ಅಗತ್ಯದ ಸಂದರ್ಭ ಟ್ಯಾಂಕರ್‌ನಲ್ಲಿಯೂ ನೀರು ತುಂಬಿಸಿಕೊಂಡು ಪೂರೈಸಿದ್ದಾರೆ.

ಆಮ್ಲಜನಕ ತಾಣ!
ಅಶ್ವತ್ಥ ಗಿಡವೊಂದು ದಿನಕ್ಕೆ ಸಾವಿರ ಜನರಿಗೆ ಬೇಕಾದ ಆಮ್ಲಜನಕ ಕೊಡಬಲ್ಲ ಸಾಮರ್ಥ್ಯ ಹೊಂದಿದೆ. ಅದು ತನ್ನ ಜೀವಿತಾವಧಿಯಲ್ಲಿ 750 ಕೋ.ರೂ. ಬೆಲೆ ಬಾಳುವ ಆಮ್ಲಜನಕವನ್ನು ನೀಡಬಲ್ಲುದು. ರಾತ್ರಿ ಮತ್ತು ಹಗಲು ಆಕ್ಸಿಜನ್‌ ಬಿಡುಗಡೆ ಮಾಡುತ್ತದೆ. ಮುಂದಿನ ಐದು ವರ್ಷಗಳಲ್ಲಿ ಅಶ್ವತ್ಥ ಗಿಡಗಳಿರುವ ಕುಂಜಾಡಿ ಪ್ರದೇಶ ಅತಿ ಹೆಚ್ಚು ಆಮ್ಲಜನಕ ಇರುವ ತಾಣವಾಗಲಿದೆ. ಕನಿಷ್ಟ ಹತ್ತು ಕಿ.ಮೀ. ತನಕ ಇದರ ಪ್ರಯೋಜನ ದೊರೆಯಲಿದೆ ಎನ್ನುತ್ತಾರೆ ಡಾ| ಶ್ರೀಶ ಕುಮಾರ್‌.

ಪರಿಸರ ಪ್ರೇಮಿ ಉಪನ್ಯಾಸಕ
ಜಲ ಸಂರಕ್ಷಣೆ, ಶುದ್ಧ ಗಾಳಿ ಪರಿಸರಕ್ಕಾಗಿ ಶ್ರಮಿಸುತ್ತಿರುವ ಡಾ| ಶ್ರೀಶ ಅವರು ಬಹುಪಾಲು ಸಮಯವನ್ನು ಪರಿಸರದ ಉಳಿವಿಗಾಗಿ ಮೀಸಲಿಟ್ಟಿದ್ದಾರೆ. ತನ್ನ ಮೂಲ ಮನೆ ಇರುವ ಉಪ್ಪಿನಂಗಡಿ ಸಮೀಪದ ಇಳಂತಿಲದ ರಸ್ತೆ ಬದಿಗಳಲ್ಲಿ 24 ಅಶ್ವತ್ಥ ಗಿಡ, 2 ಗೋಳಿ ಗಿಡಗಳನ್ನು ನೆಟ್ಟು ಜಾಗೃತಿ ಮೂಡಿಸಿರುವ ಅವರು ವಿವಿಧೆಡೆ 500ಕ್ಕಿಂತಲೂ ಹೆಚ್ಚು ಕಡೆ ಮಳೆ ಕೊಯ್ಲು ಬಗ್ಗೆ ಜಾಗೃತಿ ಉಪನ್ಯಾಸ ನೀಡಿದ್ದಾರೆ.

Advertisement

ಅಶ್ವತ್ಥ ಗಿಡ ಹಾಗೂ ಅಳವಿನಂಚಿನಲ್ಲಿರುವ ವನಸ್ಪತಿಗಳನ್ನು ನೆಟ್ಟು ಪೋಷಿಸುವ ಪ್ರಯತ್ನ ಮಾಡಿದ್ದೇನೆ. ಜಾಗದ ವ್ಯವಸ್ಥೆಯಿದ್ದರೆ ಬೇರೆ ಕಡೆಗಳಲ್ಲಿಯೂ ಅನುಷ್ಠಾನಿಸಲು ಸಿದ್ಧನಿದ್ದೇನೆ. ಇದು ಆರ್ಥಿಕ ಲಾಭಕೋಸ್ಕರ ಅಲ್ಲ. ಇದು ಪರಿಸರದ ಕಾಳಜಿಗೋಸ್ಕರ, ಶುದ್ಧ ಗಾಳಿಗೋಸ್ಕರ ಮಾತ್ರ.
– ಡಾ| ಶ್ರೀಶ ಕುಮಾರ್‌ ಎಂ.ಕೆ.

Advertisement

Udayavani is now on Telegram. Click here to join our channel and stay updated with the latest news.

Next