Advertisement

ಸೌಲಭ್ಯಕ್ಕೆ ಊಟ ಬಿಟ್ಟು ಪ್ರತಿಭಟನೆ

03:54 PM Jun 29, 2019 | Team Udayavani |

ಮಾಸ್ತಿ: ಗೋಡೌನ್‌ ಮಾದರಿ ವಿದ್ಯಾರ್ಥಿ ನಿಲಯ, ಮಲಗಲು, ಊಟಕ್ಕೆ ಸ್ಥಳಾವಕಾಶದ ಕೊರತೆ, ನೀರಿನ ಸಮಸ್ಯೆ, ಶೌಚಾಲಯವಿಲ್ಲದೆ, ಬಯಲನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದು ಮಾಸ್ತಿ ಗ್ರಾಮದ ಕಾಲೇಜು ಹಾಸ್ಟೆಲ್ ಮಕ್ಕಳು ಎದುರಿಸುತ್ತಿರುವ ಸಮಸ್ಯೆ.

Advertisement

ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ್‌ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ 52 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳು ಈ ಮೇಲಿನ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸದೆ, ಪ್ರತಿಭಟನೆ ನಡೆಸಿದರು.

ಬಯಲೇ ಶೌಚಾಲಯ: ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್‌ ಮುಂದೆ ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡರು. ನಿಲಯದಲ್ಲಿ 52 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸ್ವಚ್ಛತೆ ಇಲ್ಲ, ಮೆನು ಪ್ರಕಾರ ಉಪಾಹಾರ, ಬಿಸಿಯೂಟ ನೀಡುವುದಿಲ್ಲ. ರಾತ್ರಿ ವೇಳೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ, ನೀರಿನ ಸಮಸ್ಯೆ, ಶೌಚಾಲಯ ಇಲ್ಲದೆ ಕಿ.ಮೀ. ದೂರದ ಬಯಲಿಗೆ ಹೋಗಬೇಕಿದೆ ಎಂದು ಹೇಳಿದರು.

ಮೂಲ ಸೌಲಭ್ಯಗಳ ಕೊರತೆಯಿಂದ ತಮ್ಮ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಿದೆ. ಇದನ್ನೆಲ್ಲ ವಾರ್ಡನ್‌ ಗಮನಕ್ಕೆ ತಂದರೆ ತಲೆಕೆಡಿಸಿಕೊಳ್ಳುತ್ತಿಲ್ಲ, ಮೇಲಧಿಕಾರಿಗಳೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗೆ ತರಾಟೆ: ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್‌, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Advertisement

ಮನವೊಲಿಕೆ: ನಂತರ ವಿದ್ಯಾರ್ಥಿಗಳನ್ನು ಮನವೊಲಿಸಿ, ಈ ಹಿಂದೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದು, ಮುಂದಿನ ಸಭೆಯಲ್ಲೂ ಚರ್ಚಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು, ಬಗೆಹರಿಸುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಯೂಟ ಸೇವಿಸಿದರು.

ವಿದ್ಯಾರ್ಥಿ ನಿಲಯದ ಸಮಸ್ಯೆ:ಸ್ವಂತ ಕಟ್ಟಡವಿಲ್ಲದೆ ಭೂತ ಬಂಗಲೆಯಂತಿದ್ದ ಬಾಡಿಗೆ ಕಟ್ಟಡದಲ್ಲಿ ಸೌಲಭ್ಯಗಳ ಕೊರತೆ ನಡುವೆ 15 ವರ್ಷಗಳಿಂದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಉಳಿದುಕೊಳ್ಳಲು ವರ್ಷದ ಹಿಂದೆ ಗ್ರಾಮದ ಲೋಕೊಪಯೋಗಿ ಇಲಾಖೆಗೆ ಸೇರಿದ 3 ವಸತಿ ಗೃಹಗಳಲ್ಲಿ ಅನುಕೂಲ ಕಲ್ಪಿಸಲಾಗಿತ್ತು. ಅಲ್ಲಿ ಎರಡು ಸ್ನಾನದ ಕೊಠಡಿ, ಎರಡು ಶೌಚಾಲಯ ಮಾತ್ರ ಇದೆ. ಆದರೆ, ಪ್ರಸಕ್ತ ಸಾಲಿನಿಂದ ವಸತಿ ಗೃಹಗಳ ಸೌಲಭ್ಯವೂ ಇಲ್ಲದಂತಾಗಿದೆ. ಗೋಡೌನ್‌ ಮಾದರಿಯಲ್ಲಿರುವ ಕಟ್ಟಡದಲ್ಲಿ 52 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ನನೆಗುದ್ದಿಗೆ ಬಿದ್ದಿರುವ ಕಟ್ಟಡ:ಮಾಸ್ತಿ ಮಾಲೂರು ರಸ್ತೆಯ ಸಂತೆ ಬೀದಿಯಲ್ಲಿ ನಿರ್ಮಾಣವಾಗುತ್ತಿರುವ ಕಾಲೇಜು ಹಾಸ್ಟೆಲ್ ಕಟ್ಟಡ ಕಾಮಗಾರಿ, ಪ್ರಾರಂಭವಾಗಿ 8 ವರ್ಷ ಕಳೆದರೂ ಮುಗಿದಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ, ಕಳೆದ 5 ವರ್ಷಗಳಿಂದ ಅಪೂರ್ಣಗೊಂಡು ಸ್ಥಗಿತಗೊಂಡಿದೆ. ಸುತ್ತಲು ಗಿಡಗಂಟಿಗಳು ಬೆಳೆದು ಮರಗಳು ಬೆಳೆದು ನಿಂತಿವೆ. ಇದರಿಂದ ಕಟ್ಟಡದ ಗೋಡೆಗಳು ಬಿರುಕು ಬಿಟ್ಟು ಕಟ್ಟಡವು ತನ್ನ ಅಸ್ತಿತ್ವವನ್ನೂ ಕಳೆದುಕೊಳ್ಳುವಂತಾಗಿದೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next