Advertisement

ವಿಜಯಪುರ-ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲು ಬಿಡಿ

12:04 PM Jan 13, 2019 | |

ಬಾಗಲಕೋಟೆ: ವಿಜಯಪುರ-ಬೆಂಗಳೂರು ಮಾರ್ಗದಲ್ಲಿರುವ ರೈಲಿನಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ. ಕಾರಣ, ಈ ಮಾರ್ಗದಲ್ಲಿ ಹೊಸ ರೈಲು ಓಡಿಸಬೇಕು ಎಂದು ಕರ್ನಾಟಕ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್‌ ಖಾಜಿ ಒತ್ತಾಯಿಸಿದ್ದಾರೆ.

Advertisement

ಸಮಿತಿಯ ಪದಾಧಿಕಾರಿಗಳೊಂದಿಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಎಸ್‌.ಕೆ. ಝಾ, ವಿಭಾಗೀಯ ರೈಲು ಕಾರ್ಯ ವಿಭಾಗದ ವ್ಯವಸ್ಥಾಪಕ ಡಾ| ಕೃಷ್ಣಾ ರಡ್ಡಿ ಅವರನ್ನು ಭೇಟಿ ಮಾಡಿ, ಉತ್ತರ ಕರ್ನಾಟಕಕ್ಕೆ ರೈಲ್ವೆ ಸೇವೆ ಹಾಗೂ ರೈಲ್ವೆ ನಿಲ್ದಾಣಗಳಿಗೆ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮನವಿ ಮಾಡಿದರು.

ಹುಬ್ಬಳ್ಳಿ-ನಿಜಾಮುದ್ದಿನ್‌ ರೈಲು ಗದಗ-ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತದೆ. ಇದನ್ನು ಸೋಲಾಪುರ-ಗದಗ (ಡೆಮೋ) ಬಳ್ಳಾರಿವರೆಗೂ ಮುಂದುವರಿಸಬೇಕು. ಬಾದಾಮಿ ರೈಲು ನಿಲ್ದಾಣದಲ್ಲಿ ಗದಗ-ಮುಂಬೆ„ ಸುಪರ್‌ಫಾಸ್ಟ್‌ ಸೇರಿದಂತೆ ಎಲ್ಲ ರೈಲುಗಳ ನಿಲುಗಡೆ ಮಾಡಬೇಕು. ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಗದಗ ರೈಲು ನಿಲ್ದಾಣವನ್ನು ಬೆಂಗಳೂರಿನ ಯಶವಂತಪುರ ಮಾದರಿಯಲ್ಲಿ ನಿರ್ಮಿಸಬೇಕು. ಆಲಮಟ್ಟಿ, ಬಾಗಲಕೋಟೆ, ಬಾದಾಮಿ ಆದರ್ಶ ರೈಲು ನಿಲ್ದಾಣಕ್ಕೆ ತಕ್ಕಂತೆ ಸೌಲಭ್ಯ ಒದಗಿಸಬೇಕು. ಈ ರೈಲ್ವೆ ನಿಲ್ದಾಣಗಳನ್ನು ಆದರ್ಶ ರೈಲು ನಿಲ್ದಾಣ ಎಂದು ಘೋಷಣೆ ಮಾಡಿದರೂ, ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲ. ಕಾರಣ, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸೋಲಾಪುರ-ಮೈಸೂರ ಗೋಲಗುಂಬಜ್‌ ಎಕ್ಸ್‌ಪ್ರೆಸ್‌ ಬೆಂಗಳೂರು ನಗರಕ್ಕೆ ತಲುಪುವ ಏಕೈಕ ರೈಲು ಆಗಿದ್ದು ಜನದಟ್ಟಣೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇನ್ನೊಂದು ಫಾಸ್ಟ್‌ ಪ್ಯಾಸೆಂಜರ್‌ ವಿಜಯಪುರ- ಗದಗ-ಹೊಸಪೇಟೆ-ಬಳ್ಳಾರಿ ಮಾರ್ಗ ಮುಖಾಂತರ ಬೆಂಗಳೂರಿಗೆ ತಲುಪುವ ದಿನನಿತ್ಯ ಸಂಚರಿಸುವ ರೈಲು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಗದಗ-ಸೋಲಾಪುರ ಮಾರ್ಗಕ್ಕೆ ಒಳಪಡುವ ಎಲ್ಲ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಮೂಲಭೂತ ಸೌಲಭ್ಯ, ಪ್ರಯಾಣಿಕರ ಭದ್ರತೆ ಕಾಪಾಡುವಲ್ಲಿ ರೈಲ್ವೆ ಇಲಾಖೆ ಸಂಪೂರ್ಣ ವಿಫಲ ಆಗಿರುವುದರಿಂದ ಯೋಗ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next